ಜಿಲ್ಲೆ

ನಿರಾಶ್ರಿತನ ರಕ್ಷಣೆಗೆ ಸ್ಪಂದಿಸಿದ ಜಿಲ್ಲಾಡಳಿತ

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಲೂರು ವೆಂಕಟರಾವ ವೃತ್ತ ಬಳಿ ಮಳೆಯಲ್ಲಿ ನೆನೆದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವೃದ್ಧನ ರಕ್ಷಣೆಗೆ ಜಿಲ್ಲಾಡಳಿತ ಸ್ಪಂದಿಸಿ ಮಾನವೀಯತೆ ಮೆರೆದಿದೆ.
ಮುರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಎಂದು ಹೇಳಿಕೊಳ್ಳುತ್ತಿದ್ದ ವೃದ್ಧ, ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಈ ವಿಷಯವಾಗಿ ಪತ್ರಕರ್ತ ಹರ್ಷವರ್ಧನ ಶೀಲವಂತ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಇದನ್ನು ಗಮಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಆದೇಶಿಸಿದ್ದಾರೆ. ಹಿರಿಯ ನಾಗರಿಕರ ಇಲಾಖೆಯ ಜಿಲ್ಲಾ ಅಧಿಕಾರಿ ಜಗದೀಶ, ಉಪ ನಗರ ಠಾಣೆ ಪೊಲೀಸ್​ ಸಿಬ್ಬಂದಿ, ಡಿಮ್ಹಾನ್ಸ್​ ಸಿಬ್ಬಂದಿ ಹಾಗೂ ರಾಯಪುರ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಿಬ್ಬಂದಿ ಸಕಾಲಿಕ ಪ್ರಯತ್ನವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.