ಮಲ್ಪೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಬೇಲಿ ಅಳವಡಿಸಿರುವುದು. 
ಜಿಲ್ಲೆ

ಪ್ರವಾಸಿಗರ ಜೀವ ರಕ್ಷಣೆಗಾಗಿ ಮಲ್ಪೆ ಬೀಚ್​ಗೆ ಬೇಲಿ..!

ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ | ಸಮುದ್ರ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

  • ದೂರದಿಂದ ವೀಕ್ಷಣೆಗೆ ಅವಕಾಶ
  • ಎಚ್ಚರಿಕೆಯ ಕೆಂಪು ಬಾವುಟ ಅಳವಡಿಕೆ

ಪ್ರಶಾಂತ ಭಾಗ್ವತ, ಉಡುಪಿ
ಮಳೆಗಾಲ ಆರಂಭಗೊಂಡು ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಹಾಗೂ ಪ್ರವಾಸಿಗರ ಜೀವ ರಕ್ಷಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಉಡುಪಿ ಜಿಲ್ಲಾಡಳಿತ ಸಮುದ್ರಕ್ಕೆ ನೈಲಾನ್​ ಬಲೆಯ ಬೇಲಿ ಹಾಕಿಸಿದೆ.

ಸಮುದ್ರದಲ್ಲೀಗ ನೀರಿನ ಹಾಗೂ ತೆರೆಯ ಅಬ್ಬರ ಹೆಚ್ಚಿದ್ದು, ಖ್ಯಾತ ಪ್ರವಾಸಿ ತಾಣವಾದ ಮಲ್ಪೆ ಬೀಚ್​ಗೆ ಬೇಲಿ ಹಾಕಲಾಗಿದ್ದು, ಮಳೆಗಾಲ ಮುಗಿಯುವವರೆಗೂ ಸಮುದ್ರ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಮಲ್ಪೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ತೆರಳದಂತೆ ಉಡುಪಿ ಜಿಲ್ಲಾಡಳಿತ ಬೇಲಿ ಅಳವಡಿಸಿರುವುದು.

ಅಪಾಯ ತಡೆಯಲು ಕ್ರಮ

ರಾಜ್ಯದ ಕರಾವಳಿ ಪ್ರದೇಶದಲ್ಲಿ ಉಡುಪಿಯ ಮಲ್ಪೆ ಬೀಚ್​ ಅತ್ಯಂತ ಆಕರ್ಷಣೀಯ ಹಾಗೂ ಸುಂದರ ಪ್ರವಾಸಿ ತಾಣವಾಗಿದ್ದು ವಿಶ್ವ ಪ್ರಸಿದ್ಧವಾಗಿದೆ. ಹೀಗಾಗಿ ಮಲ್ಪೆ ಬೀಚ್​ನಲ್ಲಿ ದಿನವೂ ಜನಸಾಗರವೇ ಇರುತ್ತದೆ. ಸಮುದ್ರ ತೀರದ ಮರಳಿನಲ್ಲಿ ಆಟವಾಡುತ್ತ, ತೆರೆಯಲ್ಲಿ ಮಿಂದೇಳಲು ರಾಜ್ಯ ಹಾಗೂ ದೇಶದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಇದೀಗ ಮಳೆಗಾಲ ಆರಂಭವಾಗಿದ್ದರಿಂದ ಪ್ರವಾಸಿಗರ ಜೀವ ರಕ್ಷಣೆ ಹಾಗೂ ಸಂಭವಿಸಬಹುದಾದ ಅಪಾಯ ತಡೆಯಲು ಮಲ್ಪೆ ಬೀಚ್​ ಅಭಿವೃದ್ಧಿ ಸಮಿತಿ ಮುನ್ನೆಚ್ಚರಿಕೆಯ ಕ್ರಮವಾಗಿ ಬೇಲಿ ಅಳವಡಿಸಿದೆ.

ಕೆಂಪು ಬಾವುಟದೊಂದಿಗೆ ಎಚ್ಚರಿಕೆಯ ಫಲಕ ಅಳವಡಿಸಿರುವುದು.

ಏಳು ಅಡಿ ಎತ್ತರದ ಬೇಲಿ

ಮಲ್ಪೆ ಬೀಚ್​ ಪ್ರವೇಶ ದ್ವಾರದಿಂದ ಸಮುದ್ರ ತೀರದ ದಕ್ಷಿಣೋತ್ತರ ದಿಕ್ಕಿನಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದ ವರೆಗೆ ಏಳು ಅಡಿ ಎತ್ತರದಲ್ಲಿ ಬಲೆ ಅಳವಡಿಸಲಾಗಿದೆ. ಪ್ರವಾಸಿಗರು ಈ ಬಲೆ ದಾಟಿ ಸಮುದ್ರಕ್ಕೆ ಇಳಿಯುವಂತಿಲ್ಲ. ತಡೆ ಬೇಲಿಯೊಂದಿಗೆ ಅಲ್ಲಲ್ಲಿ ಎಚ್ಚರಿಕೆಯ ಕೆಂಪು ಬಾವುಟ ಹಾಕಲಾಗಿದೆ. ಇದರೊಟ್ಟಿಗೆ ಆಯಕಟ್ಟಿನ ಜಾಗದಲ್ಲಿ ಸಮುದ್ರ ಪ್ರವೇಶ ನಿಷೇಧ ಎಂಬ ಎಚ್ಚರಿಕೆಯ ಫಲಕಗಳನ್ನೂ ಅಳವಡಿಸಲಾಗಿದೆ.

ತೀರದಲ್ಲೇ ನಿಂತು ಸಮುದ್ರ ವೀಕ್ಷಣೆ ಹಾಗೂ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಹೊರ ರಾಜ್ಯದ ಪ್ರವಾಸಿಗರು.

ಜೀವ ರಕ್ಷಕರ ನೇಮಕ

ಮಳೆಗಾಲವಾಗಿದ್ದರೂ ಆಗಮಿಸುತ್ತಿರುವ ಪ್ರವಾಸಿಗರ ಸುರಕ್ಷತೆಗಾಗಿ ತರಬೇತಿ ಪಡೆದ ಜೀವ ರಕ್ಷಕರನ್ನು ನೇಮಿಸಲಾಗಿದೆ. ಎಟಿವಿ ಸ್ಯಾಂಡ್​ ಬೈಕ್​ ಮೂಲಕ ಅವರು ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತ, ಬೀಚ್​ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡುತ್ತ, ಅವರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಹೊರ ರಾಜ್ಯದ ಪ್ರವಾಸಿಗರಿಗೆ ಬೇಸರ

ಮಲ್ಪೆಯಷ್ಟೇ ಅಲ್ಲದೆ, ಬೈಂದೂರು ಸಮೀಪದ ಮರವಂತೆ ಬೀಚ್​, ಕಾಪು (ಬ್ಲ್ಯೂ ಫ್ಲ್ಯಾಗ್​) ಬೀಚ್​ ಹಾಗೂ ಸೋಮೇಶ್ವರ ಬೀಚ್​ಗೂ ಸಹ ಬೇಲಿ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಉಡುಪಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಎಲ್ಲೆಲ್ಲಿ ಜಲಸಾಹಸೀ ಕ್ರೀಡೆಗಳ ನಿರ್ವಹಣೆ ಮಾಡುತ್ತಿದ್ದಾರೋ ಅವರು ಟೆಂಡರ್​ ನಿಯಮಾವಳಿಯಂತೆ ತಮ್ಮ ವ್ಯಾಪ್ತಿಯಲ್ಲಿ ಕೂಡಲೇ ಬೇಲಿ ಅಳವಡಿಸುವಂತೆ ತಾಕೀತು ಮಾಡಲಾಗಿದೆ. ಉಳಿದೆಡೆ ಪ್ರವಾಸೋದ್ಯಮ ಇಲಾಖೆಯಿಂದಲೇ ಬಲೆ ಅಳವಡಿಸಲಾಗುತ್ತಿದೆ. ಇದೀಗ ಬೀಚ್​ಗೆ ಬರುವ ಪ್ರವಾಸಿಗರಿಗೆ ನೀರಿನಲ್ಲಿ ಆಟವಾಡಲು ಆಗದೇ ಬೇಸರದಿಂದ ಹಿಂದಿರುಗುತ್ತಿದ್ದಾರೆ. ಕೆಲ ಪ್ರವಾಸಿಗರು ಬೀಚ್​ನ ಮರಳಿನಲ್ಲಿಯೇ ಆಟವಾಡುತ್ತ, ವಿಡಿಯೋ ಚಿತ್ರಿಸಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡು ತೆರುಳುತ್ತಿದ್ದಾರೆ.

ಪ್ರವಾಸಿಗರು ಬೀಚ್​ನ ಮರಳಿನಲ್ಲಿಯೇ ಆಟವಾಡುತ್ತ, ವಿಡಿಯೋ ಚಿತ್ರಿಸಿಕೊಂಡು, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು.
ವಿಪರೀತ ಮಳೆ ಇದ್ದರೂ ಸಹ ಮಲ್ಪೆ ಹಾಗೂ ರಸ್ತೆ ಬದಿಯಲ್ಲೇ ಇರುವ ಮರವಂತೆ ಬೀಚ್​ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಮುದ್ರ ಅಬ್ಬರ ಹೆಚ್ಚಿದ್ದರೂ ಸಹ ಅಪಾಯದ ಅರಿವಿಲ್ಲದೆ ನೀರಿಗಿಳಿಗಿದು ಸೆಲ್ಫಿ ತೆಗೆಯಲು ಮುಂದಾಗುತ್ತಾರೆ. ಹೀಗಾಗಿ ಅಕ್ಟೋಬರ್​ 15ರ ವರೆಗೂ ಸಮುದ್ರ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಪ್ರವಾಸಿಗರ ಜೀವ ರಕ್ಷಣೆಗಾಗಿ ಆಯಕಟ್ಟಿನ ಸ್ಥಳಗಳಲ್ಲಿ ಸಮುದ್ರಕ್ಕೆ ಬೇಲಿ ಅಳವಡಿಸಲಾಗಿದೆ. ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ