ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ ಜೂಜು ಅಡ್ಡೆಗಳು ದೀಪಾವಳಿ ಹಬ್ಬದ ನೆಪದಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಕೆಲ ಪೊಲೀಸ್ ಸಿಬ್ಬಂದಿಯೇ ಜೂಜುಕೋರರ ಬೆಂಗಾವಲಿಗೆ ನಿಂತಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ಮೊದಲು ಹೊರ ವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದವರು ಪೊಲೀಸರ ದಾಳಿಗೆ ಹೆದರಿ ಸುಮ್ಮನಾಗಿದ್ದರು. ಇದೀಗ ದೀಪಾವಳಿ ಹಬ್ಬದ ನೆಪದಲ್ಲಿ ನಗರದ ಕೆಲ ಹೋಟೆಲ್ಗಳಲ್ಲಿ ಮತ್ತು ಹೊರ ವಲಯದ ಕೆಲ ಫಾಮ್ರ್ ಹೌಸ್ಗಳಲ್ಲಿ ಜೂಜು ಅಡ್ಡೆಗಳನ್ನು ಆರಂಭಿಸಿದ್ದಾರೆ.
ವಿವಿಧ ಪೊಲೀಸ್ ಠಾಣೆಗಳ ಕೆಲ ಸಿಬ್ಬಂದಿ ದೊಡ್ಡ ದೊಡ್ಡ ಜೂಜುಕೋರರೊಂದಿಗೆ ಶಾಮೀಲಾಗಿದ್ದು, ಇಸ್ಪೀಟ್ ಆಡಲು ಯಾವ ಸ್ಥಳ ಸೂಕ್ತ ಎಂಬ ಸಲಹೆ, ಸೂಚನೆಗಳನ್ನೂ ನೀಡುತ್ತಿದ್ದಾರೆ. ಅದೇ ಸಿಬ್ಬಂದಿ, ಮೇಲಧಿಕಾರಿಗಳು ದಾಳಿ ನಡೆಸಲು ಸಿದ್ಧತೆ ನಡೆಸಿದರೆ ಜೂಜು ಅಡ್ಡೆಯವರಿಗೆ ಮಾಹಿತಿ ನೀಡುತ್ತಾರೆ ಎಂಬ ಆರೋಪವಿದೆ.
ವಿಶೇಷ ಜೂಜು ಅಡ್ಡೆ ಸೃಷ್ಟಿಸಿರುವ ಕೆಲ ಕುಳಗಳು ಶ್ರೀಮಂತರು, ಜಮೀನ್ದಾರರು, ಉದ್ಯಮಿಗಳನ್ನು ಆಹ್ವಾನಿಸುತ್ತಾರೆ. ಸ್ಥಳದಲ್ಲೇ ಗುಂಡು ತುಂಡಿನ ಆಮಿಷವನ್ನೂ ಒಡ್ಡುತ್ತಾರೆ. ಗುಂಡು, ತುಂಡಿನ ನಶೆಯಲ್ಲಿ ಕೆಲ ವರ್ಷಗಳ ಹಿಂದೆ ಧಾರವಾಡದಲ್ಲಿ ಸಿದ್ದಿಮಲ್ಲಿಕ್ ಎಂಬಾತನ ಕೊಲೆ ನಡೆದಿದ್ದನ್ನು ಸ್ಮರಿಸಬಹುದು.
ಪೊಲೀಸರಿಂದಲೇ ಜೂಜಾಟ !: ಕೆಲ ಪ್ರಭಾವಿ ಪೊಲೀಸ್ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಹೋಟೆಲ್ ರೂಮ್ ಪಡೆದು ಅಂದರ್- ಬಾಹರ್ ಆಡುತ್ತಾರೆ. ಅದಕ್ಕಾಗಿ ಕೆಲವರು ಅನಾರೋಗ್ಯ ರಜೆ ಪಡೆದುಕೊಂಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಧಾರವಾಡದ ಮುಮ್ಮಿಗಟ್ಟಿ ಬಳಿ 4 ದಿನ ಹಿಂದೆ ರಾತ್ರಿ ವೇಳೆ ಪೊಲೀಸರೇ ಇಸ್ಪೀಟ್ ಆಡುತ್ತಿದ್ದುದು ಅಧಿಕಾರಿಗಳು ದಾಳಿ ಮಾಡಿದಾಗ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಅಧಿಕಾರಿಗಳ ಹೆಸರಲ್ಲಿ ವಸೂಲಿ?: ಜೂಜು ಅಡ್ಡೆ ಮೇಲೆ ದಾಳಿ ಮಾಡದಂತೆ ನೋಡಿಕೊಳ್ಳುತ್ತೇವೆ ಎಂದು ಕೆಲ ಪೊಲೀಸರು ಜೂಜುಕೋರರಿಂದ ಹಣ ಪಡೆಯುತ್ತಾರೆ. ಮೇಲಧಿಕಾರಿಗಳು ನಿಮ್ಮ ಕಡೆ ಸುಳಿಯದಂತೆ ಎಲ್ಲ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಈ ಕುರಿತು ಇತ್ತೀಚೆಗೆ ಕೆಲ ಅಧಿಕಾರಿಗಳಿಗೂ ಮಾಹಿತಿ ಹೋಗಿದ್ದು, ಇಲಾಖೆಯೊಳಗೇ ಅಘೊಷಿತ ತನಿಖೆಯೂ ನಡೆದಿದೆ ಎನ್ನಲಾಗಿದೆ.
ದೀಪಾವಳಿ ನೆಪದಲ್ಲಿ ಹು-ಧಾ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಜೂಜು ಅಡ್ಡೆಗಳು ಚಿಗುರಿಕೊಳ್ಳುತ್ತವೆಯೆ ಎಂಬುದರ ಬಗ್ಗೆ ನಿಗಾ ಇಡಲಾಗಿದೆ. ಜೂಜುಕೋರರಿಗೆ ಪೊಲೀಸ್ ಸಿಬ್ಬಂದಿ ಸಹಕರಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಆ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ನೇರವಾಗಿ ನಮಗೆ ತಿಳಿಸಿ.| ಪಿ. ಕೃಷ್ಣಕಾಂತ, ಹು-ಧಾ ಡಿಸಿಪಿ ಹಾಗೂ ಧಾರವಾಡ ಎಸ್ಪಿ