ತಿ.ನರಸೀಪುರದ ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ಶ್ರೀ ಬಣ್ಣಾರಿ ಮಾರಿಯಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆದ ಬಾಯಿ ಬೀಗ ಕಾರ್ಯಕ್ರಮದ ದೃಶ್ಯಗಳು. 
ಜಿಲ್ಲೆ

ಬಾಯಿಬೀಗ ಹಾಕುವುದನ್ನು ಅಚ್ಚರಿಯಿಂದ ನೋಡಿದ ಭಕ್ತರು

ತಿ.ನರಸೀಪುರ: ಶ್ರೀ ಬಣ್ಣಾರಿ ಮಾರಿಯಮ್ಮ ದೇವಸ್ಥಾನದ 79ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬುಧವಾರ ನಡೆದ ಸಾಮೂಹಿಕ ಬಾಯಿಬೀಗ ಕಾರ್ಯಕ್ರಮ ಗಮನ ಸೆಳೆಯುವುದರ ಜತೆಗೆ ನೋಡುಗರ ಮೈ ನವಿರೇಳಿಸುವಂತೆ ಮಾಡಿತು.

ಪಟ್ಟಣದ ಕೊಳ್ಳೇಗಾಲ-ಚಾಮರಾಜನಗರ ರಸ್ತೆಯಲ್ಲಿರುವ ಶ್ರೀ ಬಣ್ಣಾರಿ ಮಾರಿಯಮ್ಮನವರ ದೇವಸ್ಥಾನದ ಟ್ರಸ್ಟ್ ವತಿಯಿಂದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಭಾನುವಾರದಿಂದಲೇ ಚಾಲನೆ ನೀಡಲಾಗಿದ್ದು, ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಧಾರ್ಮಿಕ ಕಾರ್ಯಕ್ರಮದ ಮುಖ್ಯ ಭಾಗವಾಗಿ ಬುಧವಾರ ಬೆಳಗ್ಗೆ ಸಾಮೂಹಿಕ ಬಾಯಿಬೀಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಯಿಬೀಗ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕ ಯುವತಿಯರು, ಗೃಹಿಣಿಯರು ಹಾಗೂ ಮಂಗಳಮುಖಿಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನರು ಬಾಯಿಗೆ ಬೀಗ ಹಾಕಿಸಿಕೊಂಡು ದೇವಿಗೆ ಹರಕೆ ತೀರಿಸಿದರು.

ಸುಮಾರು 3 ರಿಂದ 10 ಅಡಿ ಉದ್ದದ ಕಬ್ಬಿಣದ ಸರಳುಗಳಿಂದ ತಯಾರಿಸಲಾದ ಚೂಪಾದ ತ್ರಿಶೂಲಾಕಾರದ ಬಾಯಿಬೀಗವನ್ನು ಭಕ್ತಾದಿಗಳಿಗೆ ಹಾಕಲಾಯಿತು. ಬಾಯಿಬೀಗ ಹಾಕಿಸಿಕೊಂಡ ಭಕ್ತಾದಿಗಳ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಬಣ್ಣಾರಿ ಮಾರಿಯಮ್ಮ ದೇವಸ್ಥಾನ ತಲುಪಿತು. ಬಾಯಿಬೀಗ ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಬೆಳಗ್ಗೆ 6 ಗಂಟೆಯಿಂದಲೇ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಬಾಯಿಬೀಗ ಹಾಕಿಸಿಕೊಂಡರು. ತಮಿಳುನಾಡಿನ ಯುವರಾಜ್ ಎಂಬುವರ ನೇತೃತ್ವದಲ್ಲಿ ಹರಕೆ ಹೊತ್ತ ಭಕ್ತಾದಿಗಳಿಗೆ ಬಣ್ಣಾರಿ ಮಾರಿಯಮ್ಮ ದೇವಸ್ಥಾನದ ಟ್ರಸ್ಟ್‌ನ ಸದಸ್ಯರು ಬಾಯಿಬೀಗ ಹಾಕುವ ಕಾಯಕದಲ್ಲಿ ತೊಡಗಿಸಿ ಕೊಂಡರು.

ತ್ರಿಶೂಲಾಕಾರದ ಸರಳನ್ನು ಭಕ್ತಾದಿಗಳ ಒಂದು ಕೆನ್ನೆಯಿಂದ ಚುಚ್ಚಿ ಮತ್ತೊಂದು ಕೆನ್ನೆಯಿಂದ ಹೊರಕ್ಕೆ ತೆಗೆಯುತ್ತಿದ್ದರೆ, ಇದನ್ನು ನೋಡಲಾಗದ ಭಕ್ತಾದಿಗಳು ಭಯದಿಂದ ಕಣ್ಣು ಮುಚ್ಚಿಕೊಂಡರೆ ಮತ್ತೆ ಕೆಲವು ಭಕ್ತಾದಿಗಳು ಬೆರಗುಗಣ್ಣಿನಿಂದ ಚಕಿತರಾಗಿ ನೋಡುತ್ತಾ ನಿಂತಿದ್ದ ದೃಶ್ಯ ಕಂಡುಬಂತು. ಸರಳನ್ನು ಕೆನ್ನೆಗೆ ಚುಚ್ಚಿದರೂ ಒಂದೇ ಒಂದು ತೊಟ್ಟು ರಕ್ತ ಹೊರಗೆ ಬಾರದಿರುವುದು ಅಚ್ಚರಿ ಮೂಡಿಸಿತು.

ದೇವಸ್ಥಾನದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ ನಡೆದ ಕೊಂಡೋತ್ಸವ ಕಾರ್ಯಕ್ರಮದಲ್ಲಿ 2 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು.

ಬಣ್ಣಾರಿ ಮಾರಿಯಮ್ಮ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಸದಸ್ಯ ವಾಸುದೇವ್, ಸುರೇಶ್, ಮಹೇಶ್,ಮೋಹನ್, ರಾಜಶೇಖರ್,ರಾಜ, ಬಾಬು, ಶೇಖರ್ ಮತ್ತಿತರರಿದ್ದರು.