ಜಿಲ್ಲೆ

ಅಭಿವೃದ್ಧಿ ಕಾರ್ಯ ತೃಪ್ತಿ ತಂದಿದೆ

ಮರಿದೇವ ಹೂಗಾರ

ಹುಬ್ಬಳ್ಳಿ: ಕಿಮ್ಸ್​ನಲ್ಲಿ ಕಳೆದ 25 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಕಳೆದ ಐದು ವರ್ಷದಿಂದ ಕಿಮ್್ಸ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡು ಮಾಡಿದ ಅಭಿವೃದ್ಧಿ ಕಾರ್ಯಗಳು ತೃಪ್ತಿ ನೀಡಿವೆ. ಇದಕ್ಕೆಲ್ಲ ಸಂಸ್ಥೆಯ ವೈದ್ಯಕೀಯ ಹಾಗೂ ವೈದ್ಯಕೀಯೇತರ ತಂಡದ ಸಹಕಾರವೇ ಕಾರಣ ಎಂದು ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ನಗರದ ಕಿಮ್ಸ್​ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಹಲವಾರು ಸಮಸ್ಯೆ ಇದ್ದವು. 2019ರಿಂದ 2023ರಲ್ಲಿ ಅವುಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಕೆಲಸ ಮಾಡಿದ್ದೇನೆ ಎಂದರು.

ವಿಶೇಷವಾಗಿ ಹಲವಾರು ವರ್ಷಗಳಿಂದ ವೈದ್ಯಕೀಯ ಸಿಬ್ಬಂದಿಗೆ ಬಡ್ತಿ ಸಿಕ್ಕಿರಲಿಲ್ಲ. ನನ್ನ ಅವಧಿಯಲ್ಲಿ 178 ಉಪನ್ಯಾಸಕರಿಗೆ ಬಡ್ತಿ ಸಿಕ್ಕಿದೆ. 30 ಸಿಬ್ಬಂದಿ ಮತ್ತು ಬ್ಯಾಕಲಾಗ್ 11ಹುದ್ದೆಗಳ ನೇಮಕವಾಗಿದೆ. 15 ಪ್ರತ್ಯೇಕ (ಸ್ವತಂತ್ರ) ವಿಭಾಗಗಳನ್ನು ಸೃಷ್ಟಿಸಲಾಯಿತು. ಬ್ಲಡ್ ಬ್ಯಾಂಕ್, ಪ್ಲಾಸ್ಮಾ ಥೆರಪಿ, ಸೆಂಟ್ರಲ್ ಲ್ಯಾಬ್ ಉನ್ನತೀಕರಣ, ಪ್ಯಾಕ್ಸ್-ಆರ್​ಐಎಸ್ ಸಿಸ್ಟಮ್ ಅಭಿವೃದ್ಧಿ ಮಾಡಲಾಯಿತು ಎಂದು ವಿವರಿಸಿದರು.

ಅತ್ಯಾಧುನಿಕ ಸಭಾಂಗಣ ನವೀಕರಣ, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ವಣ, ಸ್ಕಿಲ್ ಲ್ಯಾಬ್, ತುರ್ತು ಚಿಕಿತ್ಸಾ ಘಟಕ ನಿರ್ವಣ, ಎರಡನೇ ಕ್ಯಾಥ್​ಲ್ಯಾಬ್ ನಿರ್ವಣ, ಕ್ಯಾನ್ಸರ್ ಘಟಕದ ಅಭಿವೃದ್ಧಿ, ಕಿಡ್ನಿ ಶಸ್ತ್ರಚಿಕಿತ್ಸೆ ಹಾಗೂ ಹೃದ್ರೋಗ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು.

ಪಿಎಂಎಸ್​ಎಸ್​ವೈ ಅಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಣ, ಹೊಸ ಎಂಸಿಎಚ್ ಬ್ಲಾಕ್, ಕಾರ್ಡಿಯಾಲಜಿ ಬ್ಲಾಕ್, ನೂತನ ಶವಗಾರ ನಿರ್ಮಾಣ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ತಿಂಗಳು 4.5 ಕೋಟಿ ರೂ. ಗಳಿಕೆಯಾಗುತ್ತಿದೆ. ಆಸ್ಪತ್ರೆಯಲ್ಲಿ 250 ಸಿಸಿಟಿವಿ, ಹೊರಗಡೆ 150 ಕ್ಯಾಮರಾ ಅಳವಡಿಸಲಾಯಿತು. ಮೊದಲಿದ್ದ 1400 ಬೆಡ್​ಗಳನ್ನು 2404ಕ್ಕೆ ಹೆಚ್ಚಿಸಲಾಯಿತು. ಕೋವಿಡ್ ವೇಳೆ ಉತ್ತಮ ಕೆಲಸ ಮಾಡಿದ್ದೇವೆ. ವಿಶೇಷ ಕಲಿಕೆ, ಸಂಶೋಧನೆಗೆ ಸಂಬಂಧಿಸಿದಂತೆ ಅಮೆರಿಕ, ಇಂಗ್ಲೆಂಡ್ ಹಾಗೂ ಕೆಎಲ್​ಇ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರಾಚಾರ್ಯ ಡಾ.ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಪ್ರಕಾಶ ವಾರಿ, ಡಾ. ಮಹೇಶಕುಮಾರ ಶಂಕರ, ಡಾ. ಲಕ್ಷ್ಮೀಕಾಂತ ಲೋಕರೆ, ಡಾ.ಎಂ.ಆರ್. ಪಾಟೀಲ, ಇತರರು ಇದ್ದರು.

54 ಕೋಟಿ ರೂ. ಹೆಚ್ಚುವರಿ ಅನುದಾನ ಅಗತ್ಯ

ಕಿಮ್ಸ್​ಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳ ರೋಗಿಗಳು ಬರುತ್ತಾರೆ. ಆದರೆ, ಸಿಗುವ ಅನುದಾನ ಕಡಿಮೆ. ಒಟ್ಟಾರೆಯಾಗಿ ಸರ್ಕಾರ ವಾರ್ಷಿಕವಾಗಿ 54 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿದರೆ ಒಳಿತು ಎಂದು ಡಾ. ರಾಮಲಿಂಗಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸಿಬ್ಬಂದಿ ವೇತನ ಹೊರತುಪಡಿಸಿ ವರ್ಷಕ್ಕೆ ಕೇವಲ 24 ಕೋಟಿ ರೂ. ಅನುದಾನ ಬರುತ್ತದೆ. ಇದರಿಂದ ಎಲ್ಲ ರೀತಿಯ ವೆಚ್ಚಗಳಿಗೆ ಸಮಸ್ಯೆಯಾಗುತ್ತಿದೆ. ಬೆಂಗಳೂರು ಆಸ್ಪತ್ರೆಗೆ ಸಮಾನವಾಗಿ ಕಿಮ್್ಸ ಇದೆ. ಅಲ್ಲಿ ವಾರ್ಷಿಕವಾಗಿ 74 ಕೋಟಿ ರೂ., ಮೈಸೂರಿಗೆ 34 ಕೋಟಿ ರೂ. ಅನುದಾನ ಕೊಡಲಾಗುತ್ತದೆ. ಔಷಧಕ್ಕಾಗಿ ವಾರ್ಷಿಕ 40 ಕೋಟಿ ರೂ. ಖರ್ಚು ಮೀರುತ್ತದೆ. ಹೀಗಾಗಿ ಕಿಮ್ಸ್​ಗೆ ಪ್ರತಿ ವರ್ಷ ಹೆಚ್ಚುವರಿ ಮೊತ್ತಕ್ಕೆ ಬೇಡಿಕೆ ಇಡುವ ಪ್ರಸಂಗವಿದೆ ಎಂದರು.

4 ವರ್ಷಗಳ ಆಡಳಿತದಲ್ಲಿ ಎಲ್ಲರ ಸಹಕಾರದಿಂದ ಉತ್ತಮ ಕಾರ್ಯ ಮಾಡಿದ್ದೇನೆ. ಇದು ಕೇವಲ ನನ್ನೊಬ್ಬನ ಸಾಧನೆಯಲ್ಲ. ಮುಂದಿನ ಅವಧಿಗೆ ನಿರ್ದೇಶಕನಾಗಬೇಕೆಂಬ ಅಪೇಕ್ಷೆ ನನಗಿಲ್ಲ ಎಂದು ಆಗಲೇ ಹೇಳಿದ್ದೇನೆ.

-ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್್ಸ ನಿರ್ದೇಶಕ