ಗೌರಿಬಿದನೂರು: ಹಳ್ಳಿ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಸೇರಿದ್ದೇ ದೌರ್ಭಾಗ್ಯ ಎಂಬಂತಾಗಿದೆ. ಅತ್ತ ಹಳ್ಳಿಯೂ ಅಲ್ಲ, ಇತ್ತ ನಗರವೂ ಅಲ್ಲ ಎಂಬ ಪರಿಸ್ಥಿತಿ ಇದೆ. ಇನ್ನು ಅಭಿವೃದ್ಧಿ ವಿಚಾರಕ್ಕೆ ಬಂದರೆ ಆರಕ್ಕೇರುತ್ತಿಲ್ಲ. ಮೂರಕ್ಕಿಳಿಯುತ್ತಿಲ್ಲ! ಇದು ನಗರಸಭೆ 6ನೇ ವಾರ್ಡ್ ನಿವಾಸಿಗಳ ವ್ಯಥೆಯ ಕಥೆ.
ಕೆಲವು ಗ್ರಾಪಂ ಪ್ರದೇಶಗಳು ನಗರಸಭೆ ವ್ಯಾಪ್ತಿಗೆ ಸೇರಿದ್ದರಿಂದ ಜನ ಅಭಿವೃದ್ಧಿಯ ನಿರೀಕ್ಷೆ ಹೊಂದಿದ್ದರು. ಆದರೆ, ನಿರೀಕ್ಷೆಗಳು ಹುಸಿಯಾಗಿವೆ. ವಾರ್ಡ್ ನಿವಾಸಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.
ಯಾಮಾರಿದರೆ ಆಪತ್ತು
ಹಿಂದೆ ಗ್ರಾಮ ಪಂಚಾಯಿತಿಯಾಗಿದ್ದ ಸಂದರ್ಭದಲ್ಲಿ ಆಗಿದ್ದ ಅಭಿವೃದ್ಧಿ ಕೆಲಸಗಳನ್ನು ಬಿಟ್ಟರೆ ನಗರಸಭೆ ವ್ಯಾಪ್ತಿಗೆ ಒಳಪಟ್ಟ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಮನೆಗಳ ತ್ಯಾಜ್ಯ ನೀರು ಖಾಸಗಿ ಜಾಗ ಮತ್ತು ಮನೆಗಳ ಮುಂದೆ ಸಂಗ್ರಹವಾಗುತ್ತದೆ. ರಸ್ತೆಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ಮಳೆಗಾಲದಲ್ಲಿ ಕೆಸರು ಗದ್ದೆಗಳಾಗುತ್ತವೆ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಗಟ್ಟಿ ಮಾಡಿಕೊಂಡು ಓಡಾಡಬೇಕು. ಶಾಸಕರು ಮಳೆಗಾಲದಲ್ಲಿ ಒಮ್ಮೆ ವಾರ್ಡ್‌ಗೆ ಭೇಟಿ ನೀಡಿದರೆ ಸಮಸ್ಯೆಯ ಅರಿವಾಗುತ್ತದೆ ಎನ್ನುತ್ತಾರೆ ನಿವಾಸಿಗಳು.
ಖಾತೆ ಸಮಸ್ಯೆಗಿಲ್ಲ ಪರಿಹಾರ
ಹಳ್ಳಿ ಪ್ರದೇಶಗಳು ನಗರಸಭೆಗೆ ಸೇರಿದ ಬಳಿಕ ಆಸ್ತಿ ಹಕ್ಕುಗಳ ವರ್ಗಾವಣೆಯಲ್ಲಿ ಸೃಷ್ಟಿಯಾಗಿರುವ ಗೋಳನ್ನು ಕೇಳುವರಿಲ್ಲದಂತಾಗಿದೆ. ಖಾತೆ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೆ ಜನ ಪರದಾಡುತ್ತಿದ್ದಾರೆ.
ಒಂದೇ ತಿಂಗಳಿಗೆ ರಸ್ತೆ ಹಾಳು
ಹಿಂದೆ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರು ನಂದಿನಿ ಬಡಾವಣೆ ಅಭಿವೃದ್ಧಿಗಾಗಿ 30 ಲಕ್ಷ ರೂ. ಅನುದಾನ ಒದಗಿಸಿದ್ದರು. ಆದರೆ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇನ್ನೊಂದೆಡೆ ನಗರೋತ್ಥಾನದಡಿ ಕೈಗೊಂಡಿರುವ ಏಕೈಕ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಡಾಂಬರು ಹಾಕಿದ ಒಂದೇ ತಿಂಗಳಲ್ಲಿ ಕಿತ್ತು ಬಂದು ಹಾಳಾಗಿದೆ.
ಸಂತ್ರಸ್ತರಿಗೆ ಸಿಗದ ಸೂರು
ಸಂತೆ ಮೈದಾನ ಸಮೀಪ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ 800ಕ್ಕೂ ಹೆಚ್ಚು ಮನೆಗಳನ್ನು ದಶಕಗಳಿಂದ ನಿರ್ಮಿಸಿಕೊಂಡು ಜನ ಬದುಕುತ್ತಿದ್ದು, ನದಿ ಪಾತ್ರವಾದ ಕಾರಣ ಮಳೆಗಾಲದಲ್ಲಿ ನದಿ ಯಾವಾಗ ಉಕ್ಕಿ ಹರಿಯುತ್ತದೋ ಎಂಬ ಆತಂಕದೊಂದಿಗೆ ಇಲ್ಲಿನ ನಿವಾಸಿಗಳು ಬದುಕುತ್ತಿದ್ದಾರೆ. 2021ರಲ್ಲಿ ಸುರಿದ ಭಾರೀ ಮಳೆಗೆ ಸ್ಥಳೀಯರು ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದರು. ಮನೆಗಳಿಗೆ ನೀರು ನುಗ್ಗಿದ್ದರಿಂದ ಅನೇಕರು ಮನೆ ಬಿಟ್ಟು ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆಯುವಂತಾಗಿತ್ತು. ಆಗ ಶಾಸಕರಾಗಿದ್ದ ಎನ್.ಎಚ್. ಶಿವಶಂಕರರೆಡ್ಡಿ ಅವರು ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಿದ್ದರು. ನಗರಸಭೆ ಸದಸ್ಯ ಡಿ.ಎನ್.ವೆಂಕಟರೆಡ್ಡಿ ಜತೆಗೆ ಖಾಸಗಿ ಸಂಸ್ಥೆಗಳ ತಂಡವನ್ನು ನೇಮಿಸಿ ಡ್ರೋನ್ ಮೂಲಕ ಸರ್ವೇ ನಡೆಸಿ ಅಗತ್ಯ ದಾಖಲೆಗಳೊಂದಿಗೆ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಸಂತ್ರಸ್ತರಿಗೆ 800 ಮನೆಗಳನ್ನು ನಿರ್ಮಿಸಿಕೊಡಲು ಬರ್ಜಾನುಕುಂಟೆ, ಕಾದಲವೇಣಿ ಬಳಿ ಸರ್ಕಾರಿ ಜಾಗವನ್ನೂ ಗುರುತಿಸಲಾಗಿತ್ತು. ಆದರೆ ಇದುವರೆಗೆ ಸಂತ್ರಸ್ತರಿಗೆ ಸೂರಿನ ಭಾಗ್ಯ ದೊರೆತಿಲ್ಲ. ನದಿ ಪಾತ್ರ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಕೊಳಚೆ ನಿರ್ಮೂಲನಾ ಮಂಡಳಿ ಇದಕ್ಕೆ ಅನುದಾನ ಒದಗಿಸಬೇಕು ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿರುವುದರಿಂದ ಮೂಲಸೌಲಭ್ಯಗಳೂ ಮರೀಚಿಕೆಯಾಗಿವೆ.
ವಾರ್ಡ್‌ನಲ್ಲಿ ಚರಂಡಿ ನಿರ್ಮಾಣ ಸೇರಿ ಮೂಲಸೌಲಭ್ಯಗಳ ಅಭಿವೃದ್ಧಿ ಮಾಡಬೇಕಿದೆ. ನದಿ ದಡದ ವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ ನಗರೋತ್ಥಾನ ಯೋಜನೆಯಡಿ ಒಂದು ರಸ್ತೆಗೆ 30 ಲಕ್ಷ ರೂ. ಅನುದಾನ ಬಿಟ್ಟರೆ ಬೇರೆ ಅನುದಾನಗಳು ಸರ್ಕಾರದಿಂದ ಬಂದಿಲ್ಲ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ.
- ಡಿ.ಎನ್. ವೆಂಕಟರೆಡ್ಡಿ, ನಗರಸಭೆ ಸದಸ್ಯ
ಇತರ ನಗರವಾಸಿಗಳಂತೆ ನಾವೂ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ವಾರ್ಡ್‌ನಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಜನ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
- ಹರೀಶ್, ವಾರ್ಡ್ ನಿವಾಸಿ.
ಜನಸಂಖ್ಯೆ : 2800
ವಾರ್ಡ್ ಸಂಖ್ಯೆ : 6
ನಗರಸಭೆ ಸದಸ್ಯ : ಡಿ.ಎನ್.ವೆಂಕಟರೆಡ್ಡಿ
ವಾರ್ಡ್ ವ್ಯಾಪ್ತಿ
ಸದಾಶಿವ ಬಡಾವಣೆ, ವಿಘ್ನೇಶ್ವರ ಬಡಾವಣೆ, ಚಂದ್ರಪ್ಪ ಲೇಔಟ್, ನಂದಿನಿ ಲೇಔಟ್ ಜತೆಗೆ ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದ ಹಿರೇಬಿದನೂರು ಗ್ರಾಪಂಗೆ ಒಳಪಡುತ್ತಿದ್ದ ಹಲವು ಬಡಾವಣೆಗಳನ್ನು ಸೇರಿವೆ.
=========================