ಜಿಲ್ಲೆ

ಕ್ಯಾಟ್‌ಫಿಷ್ ಸಾಕಣೆ ಹೊಂಡಗಳ ಧ್ವಂಸ, ತಹಸೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ

ಆನೇಕಲ್: ನಿಷೇಧಿತ ಕ್ಯಾಟ್‌ಫಿಷ್ ಸಾಕಣೆ ಮಾಡುತ್ತಿದ್ದ ಹೊಂಡಗಳ ಮೇಲೆ ಅತ್ತಿಬೆಲೆ ಪೊಲೀಸರು ಹಾಗೂ ತಹಸೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಜೆಸಿಬಿಗಳ ಮೂಲಕ ಹೊಂಡಗಳನ್ನು ಧ್ವಂಸ ಮಾಡಿದರು. ಈ ಸಂಬಂಧ ಜಮೀನಿನ ಮಾಲೀಕ ವೆಂಕಟೇಶ ಹಾಗೂ ಆತನ ಪುತ್ರನನ್ನು ಬಂಧಿಸಿದರು.

ಆನೇಕಲ್ ತಾಲೂಕಿನ ಅತ್ತಿಬೆಲೆಯ ಇಂಡ್ಲಬೆಲೆಯಲ್ಲಿ ವೆಂಕಟೇಶ್, ಜಮೀನಿನಲ್ಲಿ ಮೂರು ಹೊಂಡಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ಕ್ಯಾಟ್‌ಫಿಷ್ ಸಾಕಣೆ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಈ ದಾಳಿ ಮಾಡಲಾಗಿದೆ.

ಕೆರೆಯಂತೆ ಹೊಂಡಗಳನ್ನು ನಿರ್ಮಿಸಿಕೊಂಡು ಅಂದಾಜು 20 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ನಿಷೇಧಿತ ಕ್ಯಾಟ್ ಫಿಷ್‌ಗಳನ್ನು ಸಾಕಲಾಗುತ್ತಿತ್ತು. ಪ್ರತ್ಯೇಕ ಮೂರು ಬೃಹತ್ ಹೊಂಡಗಳಲ್ಲಿ ಆಫ್ರಿಕನ್ ಕ್ಯಾಟ್ ಫಿಷ್‌ಗಳನ್ನೂ ಸಾಕಲಾಗುತ್ತಿತ್ತು.

2 ವರ್ಷದ ಹಿಂದೆಯೂ ನಡೆದಿತ್ತು ದಾಳಿ: ಇಂಡ್ಲ ಬೆಲೆಯ ಸರ್ವೇ ನಂ. 141 ಹಾಗೂ 142ರಲ್ಲಿ ಅಕ್ರಮವಾಗಿ ಮೂರ್ನಾಲ್ಕು ವರ್ಷಗಳಿಂದ ಕ್ಯಾಟ್‌ಫಿಷ್ ಸಾಕಣೆ ಮಾಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಹೊಂಡಗಳನ್ನು ಧ್ವಂಸಮಾಡಿದ್ದರು. ಆದರೂ ಆರೋಪಿ, ಹೊಂಡ ನಿರ್ಮಿಸಿಕೊಂಡು ಕ್ಯಾಟ್ ಫಿಷ್ ಸಾಕಣೆಯಲ್ಲಿ ತೊಡಗಿದ್ದ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.