ಜಿಲ್ಲೆ

ಕೊರಗ ಮಹಿಳೆಯ ಮನೆ ದ್ವಂಸ ಖಂಡನೀಯ

ಕುಂದಾಪುರ: ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಮನೆ ಕಟ್ಟಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದ ಗಂಗಾ ಕೊರಗ ಎಂಬ ಮಹಿಳೆಯ ಮನೆ ದ್ವಂಸ ಮಾಡಿರುವುದು ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ತಿಳಿಸಿದರು.

ಕಲ್ಯಾಣಿಗುಡ್ಡೆಗೆ ಭೇಟಿ ನೀಡಿ ಸಂತೃಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮನೆ ಧ್ವಂಸ ಪ್ರಕರಣದ ವಿಚಾರ ತಿಳಿದ ಕೂಡಲೇ, ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಬಡ ವಿಧವೆ ಮಹಿಳೆಗೆ ಆಗಿರುವ ಅನ್ಯಾಯವನ್ನು ವಿವರಿಸಿದ್ದೆ. ಅದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಗಳು ಮನೆ ಕೆಡವಲು ಕಾರಣರಾದವರಿಂದಲೇ ಮನೆ ನಿರ್ಮಾಣ ಮಾಡಿಸುವ ಹಾಗೂ ನೊಂದ ಮಹಿಳೆಗೆ ನ್ಯಾಯ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಗಂಗಾ ಅವರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಮನೆ ಧ್ವಂಸ ಆಗುವ ಸಂದರ್ಭದಲ್ಲಿ ಆಗಿರುವ ನಷ್ಟ ಸಂಬಂಧಿಸಿದವರಿಂದ ಭರಿಸಲು, ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಆ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಗಳನ್ನು ಗುರುತಿಸಲು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಸಿ, ಅತಿಕ್ರಮಣವಾಗಿರುವ ಹಾಗೂ ಪರಭಾರೆ ಮಾಡಿರುವ ಸರ್ಕಾರಿ ಆಸ್ತಿಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾಗಿರುವ ಭೂಮಿಯನ್ನು ದೇವಳಕ್ಕೆ ನೀಡಬೇಕು ಹಾಗೂ ಉಳಿದ ಭೂಮಿಯನ್ನು ಸರ್ಕಾರದ ಇತರೇ ಉದ್ದೇಶಗಳಿಗೆ ಮೀಸಲಿಡುವಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಹಾಗೂ ಮುಜರಾಯಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಸ್ಥಳೀಯ ಪ್ರಮುಖರಾದ ಹರೀಶ್ ತೋಳಾರ್ ಕೊಲ್ಲೂರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ ಶೆಟ್ಟಿ, ವಿನಾಯಕ ಆಚಾರ್, ಸುರೇಶ್ ಪೂಜಾರಿ ದಳಿ, ಹರೀಶ್ ಸಿ.ವಿ.ಇದ್ದರು.