ಜಮಖಂಡಿ ನಗರದ ಬಿಎಲ್‌ಡಿ ಕಾಲೇಜಿನ ದರ್ಬಾರ್ ಹಾಲ್‌ನಲ್ಲಿ ನಡೆದ ವಾಣಿಜ್ಯ ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯ ವಜ್ರಮಹೋತ್ಸವ ವರ್ಷಾಚರಣೆ ಹಾಗೂ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿ,ವಿದ್ಯಾರ್ಥಿನಿಯರನ್ನುಸನ್ಮಾನಿಸಲಾಯಿತು. ಸಂತೋಷ ಕಾಮಗೌಡ, ಡಾ. ಎಸ್.ಎಚ್.ಲಗಳಿ, ಡಾ. ಡಿ.ಎಸ್.ನಿಟ್ಟೂರ, ಡಾ.ಎಸ್.ಬಿ.ಕಮತಿ ಇದ್ದಾರೆ.  
ಜಿಲ್ಲೆ

ಗುರಿ ತಲುಪಲು ಸಾಧನೆಯ ಹಂಬಲ ಅವಶ್ಯ

ಜಮಖಂಡಿ: ಸಾಧನೆಯ ಹಂಬಲವಿದ್ದರೇ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿಕ್ಷಣ ಎನ್ನುವುದು ಅತಿದೊಡ್ಡ ಶಕ್ತಿಯಾಗಿದ್ದು, ಅದನ್ನು ಪಡೆಯಲು ಅಂತ್ಯವೆಂಬುದೇ ಇಲ್ಲ ಎಂದು ಬೆಳಗಾವಿ ರಾಣಿಚನ್ನಮ್ಮ ವಿವಿ ಕುಲಸಚಿವ ಸಂತೋಷ ಕಾಮಗೌಡ ಹೇಳಿದರು.

ನಗರದ ಬಿಎಲ್‌ಡಿ ಕಾಲೇಜಿನ ದರ್ಬಾರ್ ಹಾಲ್‌ನಲ್ಲಿ ನಡೆದ ವಾಣಿಜ್ಯ ಬಿಎಚ್‌ಎಸ್, ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದ ವಜ್ರಮಹೋತ್ಸವ ವರ್ಷಾಚರಣೆ ಹಾಗೂ 2024-25 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಒಕ್ಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಡತನ ಕುಟುಂಬದಿಂದ ಬಂದವರು ಉನ್ನತ ಹುದ್ದೆಯಲ್ಲಿ ಇದ್ದಾರೆ. ಮೊದಲು ಶಿಸ್ತು, ಸಮತೆ, ಬದ್ಧತೆ ಪಾಲನೆ ಮಾಡಬೇಕು. ನಾವುಗಳು ಯಾಕೆ ಓದಬೇಕು ಹಾಗೂ ಯಾರ ಜತೆಯಲ್ಲಿ ಇರಬೇಕು ಎಂಬುವುದು ತಿಳಿದುಕೊಳ್ಳಬೇಕು. ನನ್ನಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುವದನ್ನು ಮೊದಲು ಬಿಡಬೇಕು. ಸಾಧನೆಗೆ ವಯೋಮಿತಿ ಇರುವುದಿಲ್ಲ. ಬಡತನದ ಕಾರಣದಿಂದಲೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಕೈ-ಕಾಲುಗಳು ಇಲ್ಲದೆ ಇರುವ ವ್ಯಕ್ತಿಯು ಸಹ ಸಾಧನೆಯನ್ನು ಮಾಡಿ ಮತ್ತೊಬರಿಗೆ ಪ್ರೇರಣೆ ಆಗಿರುವ ಉದಾಹರಣೆಗಳಿವೆ. ಸಾಧನೆಗೆ ಸಣ್ಣಪುಟ್ಟ ಹೆಜ್ಜೆ ಇಡುವ ಮೊದಲು ಪ್ರಯತ್ನ ಮಾಡಬೇಕು. ಗುರಿ ತಲುಪಬೇಕಾದರೆ ಮೊದಲು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು. ದೈಹಿಕವಾಗಿ ಸದೃಡವಾಗಿದ್ದರೆ ಮಾತ್ರ ಮಾನಸಿಕ ಸದೃಢತೆ ಹೊಂದಲು ಸಾಧ್ಯ ಎಂದರು.

ಪದವಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಆಡಳಿತಾಧಿಕಾರಿ ಡಾ. ಎಸ್.ಎಚ್.ಲಗಳಿ, ಡಾ. ಡಿ.ಎಸ್.ನಿಟ್ಟೂರ, ಡಾ.ಎಸ್.ಬಿ.ಕಮತಿ ಇದ್ದರು. ಪ್ರಾಚಾರ್ಯ ಡಾ. ಪಿ.ಡಿ. ಪೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆನಂದ ಉಪ್ಪಾರ, ಡಾ. ಕೆ.ಎಂ. ಶಿರಹಟ್ಟಿ ವರದಿ ವಾಚನ ಮಾಡಿದರು. ಗಣೇಶ ಮಾದರ ಪ್ರಾರ್ಥನಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು.