ಜಿಲ್ಲೆ

ಜಾನುವಾರು ಜೀವಕ್ಕೆ ಕುತ್ತಾದ ದಟ್ಟಹೊಗೆ!

ಕೋಲಾರ ಡೆಸ್ಕ್

ಲಕ್ಕೂರು: ಬಯಲು ಸೀಮೆಯ ಈ ಭಾಗದಲ್ಲಿ ಹೈನುಗಾರಿಕೆಯೇ ರೈತಾಪಿ ವರ್ಗದ ಜೀವನಾಧಾರ. ಆದರೆ, ಇತ್ತೀಚೆಗೆ ಆರೋಗ್ಯವಾಗಿದ್ದ ರಾಸುಗಳೇ ಇದ್ದಕ್ಕಿದ್ದಂತೆ ಅಸುನೀಗುತ್ತಿದ್ದು, ರೈತರ ಪಾಲಿಗೆ ಬರಸಿಡಿಲು ಬಡಿದಂತಾಗಿದೆ.

ಹೌದು. ಲಕ್ಕೂರು ಗ್ರಾಪಂ ವ್ಯಾಪ್ತಿಯ ಚೂಡಗೊಂಡಹಳ್ಳಿ ಗ್ರಾಮವೊಂದರಲ್ಲೇ 6 ತಿಂಗಳಲ್ಲಿ 20ಕ್ಕೂ ಹೆಚ್ಚು ಸೀಮೆ ಹಸುಗಳು ಮರಣಿಸಿರುವುದೇ ಇದಕ್ಕೆ ತಾಜಾ ಉದಾಹರಣೆ.

ಈ ಸಮಸ್ಯೆಗೆ ಇಲ್ಲಿರುವ ಖಾಸಗಿ ಕಾರ್ಖಾನೆ ಹೊರಸೂಸುವ ದಟ್ಟಹೊಗೆ ಹಾಗೂ ತ್ಯಾಜ್ಯವೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆರೋಪಕ್ಕೆ ಪೂರಕ ಎಂಬಂತೆ ಹಳ್ಳಿಯಲ್ಲಿ ನಿತ್ಯ ಒಂದಿಲ್ಲೊಂದು ದನ, ಕರು, ಕುರಿ, ಮೇಕೆ ಬಲಿಯಾಗುತ್ತಿವೆ. ಆದರೆ, ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಕಂಡೂ ಕಾಣದಂತಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ಕ್ರಮಕೈಗೊಳ್ಳದ ಜನಪ್ರತಿನಿಧಿಗಳು

ಕಾರ್ಖಾನೆಗೆ ಹತ್ತಿರವಿರುವ ಚೂಡಗೊಂಡಹಳ್ಳಿಯಲ್ಲಿ 60ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲರೂ ಹಸು ಸಾಕಣೆಯಿಂದ ಜೀವನ ನಡೆಸುತ್ತಿದ್ದಾರೆ. ನಿತ್ಯ ಸುಮಾರು 200 ಲೀಟರ್​ ಹಾಲನ್ನು ಪೂರೈಸುತ್ತಿದ್ದರು. ಆದರೆ, ಕಂಪನಿಯಿಂದ ಶುರುವಾಗಿರುವ ಸಮಸ್ಯೆಯಿಂದ ಹಸುಗಳ ಮರಣ ಪ್ರಕರಣ ಹೆಚ್ಚುತ್ತಿರುವುದು ರೈತರನ್ನು ಇನ್ನಿಲ್ಲದಂತೆ ಕಂಗೆಡಿಸಿದೆ.

ಈ ಬಗ್ಗೆ ಶಾಸಕರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎನ್ನುವ ಗ್ರಾಮಸ್ಥರು, ಲಕ್ಕೂರು ಪಶುವೈದ್ಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಮಾಲೂರು ಪಟ್ಟಣದಿಂದ ವೈದ್ಯರು ತಕ್ಷಣ ಆಗಮಿಸುವುದಕ್ಕೆ ಸಾಧ್ಯವಿಲ್ಲದಂತಾಗಿದೆ. ಇದರಿಂದ ರಾಸುಗಳು ಉಸಿರು ಚೆಲ್ಲುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಳ್ಳುತ್ತಾರೆ.

ವಿಷವಾದ ಕಾರ್ಖಾನೆ

ಖಾಸಗಿ ಕಾರ್ಖಾನೆಯ ಸುತ್ತಮುತ್ತ ಸುಮಾರು 1.5 ಕಿಲೋ ಮೀಟರ್​ವರೆಗೂ ತೋಟ ಹಾಗೂ ಹೊಲಗಳಲ್ಲಿ ಬ್ಯಾಟರಿ ರಾಸಾಯನಿಕ ಮಿಶ್ರಣದಿಂದಾಗಿ ನೀರು, ಗಾಳಿ ವಿಷಯುಕ್ತವಾಗಿದ್ದು, ಇದೇ ಪ್ರದೇಶದಲ್ಲಿ ಮೇವು ತಿನ್ನುವ ಕುರಿ ಮೇಕೆಗಳು ಕೆಲವೇ ಕ್ಷಣಗಳಲ್ಲಿ ಒದ್ದಾಡಿ ಒದ್ದಾಡಿ ಪ್ರಾಣ ಬಿಡುತ್ತಿವೆ. ಇತ್ತೀಚೆಗೆ ಹಸುವನ್ನು ತೋಟದಲ್ಲಿ ಮೇಯಿಸಿಕೊಂಡು ಬಂದು ಕಟ್ಟಿಹಾಕಿದ ಕೆಲವೇ ಕ್ಷಣಗಳಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿತು. ಬಾಯಿಯಲ್ಲಿ ನೊರೆ ಸುರಿಸಿಕೊಂಡು ಒದ್ದಾಡುತ್ತಿತ್ತು, ಸಮಯಕ್ಕೆ ಸರಿಯಾಗಿ ಪಶುವೈದ್ಯರು ಆಗಮಿಸದ ಕಾರಣ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಗ್ರಾಮದ ಶ್ರೀನಾಥ ಅಳಲು ತೋಡಿಕೊಂಡರು.

ಇದೇ ರೀತಿ ಸುತ್ತಮುತ್ತ ಹಳ್ಳಿಗಳಲ್ಲಿ ಸುಮಾರು ಕುರಿಗಳು ಸತ್ತಿವೆ. ಪಶುವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದರೆ ಇಂತಹ ಪ್ರಾಣಾಪಾಯದ ಸ್ಥಿತಿ ಬರುತ್ತಿರಲಿಲ್ಲ. ಮೂಕ ಪ್ರಾಣಿಗಳ ವೇದನೆ, ರೋದನೆ ನೋಡಿದರೆ ಎಂಥವರಿಗೂ ಕರುಳು ಕಿವಿಚುವಂತಾಗುತ್ತದೆ, ಇತ್ತೀಚೆಗಂತೂ ಈ ಭಾಗದ ಪ್ರಾಣಿಗಳಲ್ಲಿ ಗರ್ಭ ಸಹ ನಿಲ್ಲುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹ.

ಪರಿಸರ ಸಂಪೂರ್ಣ ಮಾಲಿನ್ಯ

ಮಾಲೂರು&ಹೊಸೂರು ಮುಖ್ಯ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಹಳೆಯ ಬ್ಯಾಟರಿಗಳನ್ನು ಪುಡಿ ಮಾಡಿ ಬೇರ್ಪಡಿಸಲಾಗುತ್ತದೆ. ಹಳೆಯ ಬ್ಯಾಟರಿಯಲ್ಲಿರುವ ಆಸಿಡ್​, ಸೋಡಾ, ಲೆಡ್​, ಜಿಂಕ್​, ಸಲ್ಫೆಡ್​ ಕಾರ್ಬನ್​ ಹಾಗೂ ಕಾಪರ್​ ಮುಂತಾದ ರಾಸಾಯನಿಕ ಬೇರ್ಪಡಿಸಿದಾಗ ವಿಷಯುಕ್ತ ನಿರುಪಯುಕ್ತ ಪುಡಿ ನೀರಿನಲ್ಲಿ ಬೆರೆತು ಈ ಭಾಗದ ಹಳ್ಳಿಗಳಲ್ಲಿ ಜಲಮಾಲಿನ್ಯಕ್ಕೆ ಕಾರಣವಾಗಿದೆ. ರಾತ್ರಿ ದಟ್ಟಹೊಗೆ ಉಗುಳುವುದರಿಂದ ವಾಯುಮಾಲಿನ್ಯವೂ ಹೆಚ್ಚಾಗಿದೆ. ಇದೇ ಗಾಳಿಯನ್ನು ಉಸಿರಾಡುವ ಮನುಷ್ಯ ಮತ್ತು ಪ್ರಾಣಿಗಳ ಪ್ರಾಣಪಾಯಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿದೆ.

ಹಳ್ಳಿಗಳನ್ನು ಹಳ್ಳಿಗಳಾಗಿ ಇರಲು ಬಿಡಿ, ನಗರದ ನಾಗರಿಕತೆಯ ಲೇಪನ ಮಾಡಿದರೆ ಶುದ್ಧ ತರಕಾರಿ ಆಹಾರ ದೊರೆಯುವುದು ಕಷ್ಟವಾಗುತ್ತದೆ. ಹೈನುಗಾರಿಕೆಯಿಂದ ಸಾಕಷ್ಟು ಕುಟುಂಬಗಳು ಜೀವಿಸಲು ಸಾಧ್ಯವಾಗಿದೆ. ರೈತರ ಸಹಪಾಠಿಗಳಾದ ಸಾಕು ಪ್ರಾಣಿಗಳು ಈ ರೀತಿ ಮೃತಪಡುತ್ತಿದ್ದು, ಇದಕ್ಕೆ ಕೊನೆಯೇ ಇಲ್ಲವೆ?

- ವೆಂಕಟೇಶ

ಗ್ರಾಮಸ್ಥ ಚೂಡಗೊಂಡಹಳ್ಳಿ

ಕಾರ್ಖಾನೆ ತ್ಯಾಜ್ಯ ಹಾಗೂ ಹೊಗೆಯಿಂದಾಗಿ ಸುತ್ತಮುತ್ತಲ ತೊಟಗಳ ಬೆಳೆಗಳು ವಿಷಯುಕ್ತವಾಗುತ್ತಿವೆ. ಈ ಬಗ್ಗೆ ರೈತರು ಪ್ರಶ್ನೆ ಮಾಡುವಂತಿಲ್ಲ. ಕೇಳಿದರೆ ಏನು ಬೇಕಾದರೂ ಮಾಡಿಕೊಳ್ಳಿ, ನಾವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ, ನಮ್ಮ ಕಾರ್ಖಾನೆಯಿಂದ ನಿಮಗೆ ತೊಂದರೆಯಾಗಿದ್ದಲ್ಲಿ ಅದಕ್ಕೆ ಸರಿಯಾದ ಆಧಾರ ನೀಡಿ ಎಂದು ಗದರುತ್ತಾರೆ. ಧೂಳಿನಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿ ಇದೆ. ಈ ಧೂಳು ಕಣ್ಣಿಗೆ ಬಿದ್ದರೆ ಕಾರದ ಪುಡಿ ಬಿದ್ದ ಅನುಭವವಾಗುತ್ತಿದೆ.

- ನಾಗರಾಜ್​

ಗ್ರಾಮಸ್ಥ, ಚೂಡಗೊಂಡಹಳ್ಳಿ

ಕಾರ್ಖಾನೆಯ ಧೂಳು ಹಾಗೂ ಹೊಗೆಯಿಂದ ಶ್ವಾಸಕೋಶದ ತೊಂದರೆಯಾಗುತ್ತಿದೆ. ಕಾರ್ಖಾನೆ ಉಗುಳುವ ಕೆಟ್ಟ ವಾಸನೆಯ ಹೊಗೆ ಸುಮಾರು 2ರಿಂದ 3 ಕಿಮೀ ವ್ಯಾಪ್ತಿ ಹರಡುತ್ತದೆ. ನಿರುಪಯುಕ್ತ ಪುಡಿ ಮಳೆಯ ನೀರಿನ ಮೂಲಕ ಹರಿದು ಹಳ್ಳ ಕೊಳ್ಳ, ಕೆರೆಗೆ ಸೇರಿ ದನ&ಕರು, ಕುರಿ&ಮೇಕೆಯಂತಹ ಸಾಕು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ.

- ನಾಗರತ್ನಮ್ಮ

ಹಸುವಿನ ಮಾಲೀಕರು ಚೂಡಗೊಂಡಹಳ್ಳಿ

ಚೂಡಗೊಂಡಹಳ್ಳಿ ಸಮೀಪದ ಖಾಸಗಿ ಕಾರ್ಖಾನೆಯಿಂದ ಹೊರ ಬರುವ ವಾಯು ಮಾಲಿನ್ಯ ಹಾಗೂ ಜಲ ಮಾಲಿನ್ಯದಿಂದ ಪ್ರಾಣಿಗಳು ಮೃತಪಡುತ್ತಿರುವುದು ಗಮನಕ್ಕೆ ಬಂದಿಲ್ಲ. ಶನಿವಾರ ಒಂದು ಹಸು ಮೃತಪಟ್ಟಿದೆ ಎಂದು ಆ ಭಾಗದ ವೈದ್ಯಾಧಿಕಾರಿಗೆ ಪಶುಪಾಲಕರೊಬ್ಬರು ಮಾಹಿತಿ ನೀಡಿದ್ದಾರೆ. ಭಾನುವಾರ ರಜೆ ಇದ್ದ ಕಾರಣ ಮರಣ ಪರೀಕ್ಷೆ ನಡೆಸಲು ಸೋಮವಾರದ ತನಕ ಕಾಯಿರಿ ಎಂದರೆ ಅವರು ಹಾಗೆಯೇ ಹಸುವನ್ನು ಮಣ್ಣು ಮಾಡಿದ್ದಾರೆ. ಅದರ ಅಂಗಾಗಗಳನ್ನು ತೆಗೆದು ಲ್ಯಾಬಿಗೆ ಕಳುಹಿಸಿಕೊಟ್ಟಿದ್ದರೆ ವಾಸ್ತವಾಂಶ ಗೊತ್ತಾಗುತ್ತಿತ್ತು. 20 ಹಸುಗಳು ಮೃತಪಟ್ಟಿದ್ದಾವೆ ಎಂದರೆ ಇದುವರೆವಿಗೂ ಇಲಾಖೆಗೆ ಏಕೆ ಮಾಹಿತಿ ನೀಡಿಲ್ಲ. ನಾವು ಕಾರ್ಖಾನೆಯಿಂದ ಪ್ರಾಣಿಗಳು ಸಾಯುತ್ತಿವೆ ಎಂದು ಹೇಳಲು ಹೇಗೆ ಸಾಧ್ಯ?. ಮಾಹಿತಿ ಸಂಗ್ರಹಿಸಿ, ಪರಿಶೀಲಿಸಲಾಗುವುದು.

 -ವೀಣಾ

ಸಹಾಯಕ ನಿರ್ದೇಶಕಿ, ಪಶುಪಾಲನಾ ಇಲಾಖೆ. ಮಾಲೂರು