ಜಿಲ್ಲೆ

ಮಾರಾಟಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದ್ದರೂ ಹುಣಸೆ, ಹಲಸಿಗೆ ಬೇಡಿಕೆ ಕಡಿಮೆ

Tumakuru

ತುಮಕೂರು: ಜಿಲ್ಲೆಯಲ್ಲಿ ಕೊಬ್ಬರಿಯಷ್ಟೇ ಬೆಳೆಯಲಾಗುವ ಹುಣಸೆ ಹಾಗೂ ಹಲಸಿನ ಹಣ್ಣು ಮಾರಾಟಕ್ಕೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿದ್ದರೂ ಮಾರುಕಟ್ಟೆಯಲ್ಲಿ ಈ ವರ್ಷ ಬೇಡಿಕೆ ಕಡಿಮೆಯಾಗಿರುವುದು ಬೆಳೆಗಾರರಿಗೆ ದೊಡ್ಡನಷ್ಟ ತಂದೊಡ್ಡುವ ಮುನ್ಸೂಚನೆಯಾಗಿದೆ.

ಹಲಸಿನ ಪ್ರಮುಖ ಮಾರುಕಟ್ಟೆಯಾಗಿರುವ ಚೇಳೂರಿನಲ್ಲಿ ಹಲಸು ಕೊಳ್ಳುವವರೇ ಇಲ್ಲದಂತಾಗಿದ್ದು, ರೈತರು ಹಣ್ಣು ತರುವುದನ್ನೇ ನಿಲ್ಲಿಸಿದ್ದಾರೆ. ಹಲಸಿನ ಹಣ್ಣು ಬಳಸಿಕೊಂಡು ಸ್ವಸಹಾಯ ಗುಂಪುಗಳೇ ಖಾದ್ಯ ತಯಾರಿಸಿ ಸೃಷ್ಟಿಸಿಕೊಂಡಿದ್ದ ಸ್ಥಳೀಯ ಮಾರುಕಟ್ಟೆಯೂ ನಿಶ್ಶಬ್ದವಾಗಿದ್ದು ಹಲಸಿನ ಹಣ್ಣುಗಳು ಮರಗಳಲ್ಲಿಯೇ ಕೊಳೆಯಲಾರಂಭಿಸಿವೆ. ಪ್ರತಿವರ್ಷ ಈ ಕಾಲದಲ್ಲಿ ಪ್ರತಿದಿನ 8ರಿಂದ 10ಟನ್ ಹಲಸು ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಗೆ ರಫ್ತಾಗುತ್ತಿತ್ತು.

ಕರೊನಾ ವೈರಸ್ ಹತೋಟಿಗೆ ಬಂದಿದ್ದರಿಂದ ಇತ್ತೀಚೆಗಷ್ಟೇ ಆಂಧ್ರ, ಮಹಾರಾಷ್ಟ್ರಕ್ಕೆ ಸಕಲ ಮುನ್ನೆಚ್ಚರಿಕೆಯಿಂದ ಹಣ್ಣುಗಳನ್ನು ರಫ್ತು ಮಾಡಲು ಜಿಲ್ಲಾಡಳಿತ ಒಪ್ಪಿಗೆ ನೀಡಿತ್ತಾದರೂ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಭಾವ ಬೆಳೆಗಾರರನ್ನು ಕಾಡಲಾರಂಭಿಸಿದೆ. ಕರೊನಾ ಎಫೆಕ್ಟ್ ಎಲ್ಲರಿಗೂ ತಟ್ಟಲಾರಂಭಿಸಿದೆ.

ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲಿ ಅತೀ ಹೆಚ್ಚಾಗಿ ಬೆಳೆಯಲಾಗುವ ಹುಣಸೆಯ ಬೆಲೆ ನೆಲ ಕಚ್ಚಿದೆ. ಜಿಲ್ಲೆಯ ಜನರ ಬಹುಮುಖ್ಯ ಬೆಳೆಯಾಗಿರುವ ಹುಣಸೆ ಹಣ್ಣು ಮಾರಾಟ ಮಾಡಲು ಮಾರುಕಟ್ಟೆಯೇ ಇಲ್ಲದಂತಾಗಿದೆ. ಜಿಲ್ಲೆಯ ಹುಣಸೆ ಬೆಳೆಗಾರರು ನೆರೆಯ ಹಿಂದೂಪುರ, ಚಳ್ಳಕೆರೆ ಮಾರುಕಟ್ಟೆ ಅವಲಂಬಿಸಿದ್ದರು.

ಹಿಂದೂಪುರದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾರುಕಟ್ಟೆಯನ್ನು ಲಾಕ್‌ಡೌನ್ ಮಾಡಲಾಗಿದೆ. ಹಾಗಾಗಿ, ಎಲ್ಲರೂ ತುಮಕೂರು ಎಪಿಎಂಸಿಗೆ ಹೆಚ್ಚು ಹಣ್ಣು ತಂದು ಮಾರಾಟ ಮಾಡಲಾರಂಭಿಸಿದ್ದು ಬೆಲೆ ಪಾತಾಳಕ್ಕೆ ಕುಸಿದಿದೆ. ಗುಣಮಟ್ಟದ ಹುಣಸೆಹಣ್ಣು ಕೆಜಿಗೆ 120 ರಿಂದ 170 ರೂ., ಬೆಲೆಗೆ ಮಾರಾಟವಾಗುತ್ತಿದೆ. ಒಮ್ಮೊಮ್ಮೆ ಚೀಲದಿಂದ ಹೊರತೆಗೆದ ಹಣ್ಣು ಮತ್ತೆ ಶೇಖರಿಸಿಡುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ರೈತರು ಬೇರೆ ಅವಕಾಶವಿಲ್ಲದೆ ಅಗ್ಗದ ಬೆಲೆಗೆ ಹಣ್ಣು ಮಾರುವ ಅನಿವಾರ್ಯತೆಯಿದೆ.

ಕಳೆದ ವರ್ಷ ಬರೋಬ್ಬರಿ 90 ಸಾವಿರ ಕ್ವಿಂಟಾಲ್ ಹುಣಸೆಹಣ್ಣು ಹೊರರಾಜ್ಯಗಳಿಗೆ ರಫ್ತಾಗಿತ್ತು, ವರ್ತಕರಿಗೆ ಕೆಲವು ಮಾರ್ಗಸೂಚಿಗಳನ್ನು ವಿಧಿಸಿ ಹೊರರಾಜ್ಯಕ್ಕೆ ಲಾರಿಗಳನ್ನು ಕಳುಹಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದ್ದರೂ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಟೇಕಾಫ್ ಆಗುತ್ತಿಲ್ಲ ಎಂದು ವರ್ತಕ ನಾರಾಣಸ್ವಾಮಿ ತುಮಕೂರು ಮಾರುಕಟ್ಟೆಯಲ್ಲಿ ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಹಲಸಿನಹಣ್ಣು ಮಾರಾಟ ಹೆಚ್ಚಾಗಿಯೇ ನಡೆಯುತ್ತದೆ. ಗುಬ್ಬಿ ತಾಲೂಕು ಚೇಳೂರು ಪ್ರಮುಖ ಮಾರುಕಟ್ಟೆ. ರೈತರಿಗೆ ನಷ್ಟವಾಗದಂತೆ ಹಲಸಿನಹಣ್ಣು ಮಾರಾಟ ಹಾಗೂ ಸಾಗಣೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಆದರೆ, ಹೊರರಾಜ್ಯಗಳಲ್ಲಿಯೂ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ರಘು ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ನೆರೆಯ ರಾಜ್ಯದ ಹಿಂದೂಪುರ ಹುಣಸೆಹಣ್ಣು ಮಾರಾಟದ ಪ್ರಮುಖ ಕೇಂದ್ರವಾಗಿತ್ತು. ಈಗ ಅಲ್ಲಿಯೂ ಕರೊನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾರಾಟವೇ ಕಷ್ಟವಾಗಿದೆ. ಪಾವಗಡ, ಮಧುಗಿರಿ ಭಾಗದಲ್ಲಿ ಬಹುತೇಕ ಕುಟುಂಬಗಳ ಆದಾಯದ ಮೂಲ ಹುಣಸೆಯೇ ಆಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭವಿಷ್ಯ ಮತ್ತಷ್ಟು ಕಷ್ಟವಾಗಲಿದೆ. ಅಂಜಿನಪ್ಪ ಪಾವಗಡ