ಅರವಿಂದ ಅಕ್ಲಾಪುರ ಶಿವಮೊಗ್ಗ
ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಮತ್ತೆ ಪಕ್ಷಾಂತರಿಗಳ ಆತಂಕ ಶುರುವಾಗಿದೆ. ಪ್ರತಿ ಲೋಕಸಭೆ ಚುನಾವಣೆಯಲ್ಲಿ ಕೈ ಹಿಂದಕ್ಕೆ ಜಾರಲು ಕಾರಣವಾಗಿರುವುದೇ ಪಕ್ಷಾಂತರಿಗಳು ಇಲ್ಲವೇ ಅನ್ಯ ಪಕ್ಷದೊಂದಿಗಿನ ಮೈತ್ರಿ. ಈ ಎರಡು ಸಂಗತಿಗಳಿಂದ ಬಸವಳಿದ ಕಾಂಗ್ರೆಸ್‌ನೊಳಗೆ ಈಗ ಮತ್ತೆ ಕಸಿವಿಸಿ ಆರಂಭವಾಗಿದೆ.
ನಾಲ್ಕು ತಿಂಗಳ ಹಿಂದೆ ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್ ಪಡೆದ ಆಯನೂರು ಮಂಜುನಾಥ್ ಈಗ ಕೈನತ್ತ ನೋಡುತ್ತಿರುವುದು ಆ ಪಕ್ಷದ ಮುಖಂಡರಲ್ಲಿ ಕಳವಳ ಮೂಡಿಸಿದೆ. ರಾಜ್ಯ ಮಟ್ಟದಲ್ಲಿ ನಾಯಕರು ಒಪ್ಪಿದರೂ ಜಿಲ್ಲೆಯಲ್ಲಿ ಕೆಂಪು ಹಾಸು ನೀಡಿ ಸ್ವಾಗತಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರು ಇದ್ದಂತಿಲ್ಲ.
ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಸಮಾಧಾನ ಕಂಡಿರುವ ಕಾಂಗ್ರೆಸ್ ಜಿಲ್ಲಾ ಮುಖಂಡರಿಗೆ ಈಗ ಆಯನೂರು ಬಿಸಿತುಪ್ಪವಾಗಿದ್ದಾರೆ. ಎರಡು ದಶಕಗಳ ಹಿಂದೆ ಅವರು ಕಾಂಗ್ರೆಸ್‌ಗೆ ನೀಡಿದ್ದ ಹೊಡೆತವನ್ನು ಆ ಪಕ್ಷದ ಅನೇಕ ಮುಖಂಡರು ಇನ್ನೂ ಮರೆತಿಲ್ಲ. ಹೀಗಾಗಿ ಜಿಲ್ಲಾ ಸಮಿತಿಯೊಳಗೆ ಅವರ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ.
ಸಮಾಜವಾದ ಹೋರಾಟದ ಕರ್ಮಭೂಮಿಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಬೇರು ಬಿಟ್ಟಿದ್ದು ಇತಿಹಾಸ. ಆದರೆ 2014ರಲ್ಲಿ ಮಾತ್ರ ಲೋಕಸಭೆಗೆ ಅಭ್ಯರ್ಥಿ ಕಣಕ್ಕಿಳಿಸಿದ್ದ ಕಾಂಗ್ರೆಸ್, ಮತ್ತೊಂದು ಉಪಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿತ್ತು. ಮೂರು ದಶಕಗಳಲ್ಲಿ ಪಕ್ಷಾಂತರಿಗಳು ಹಾಗೂ ಮೈತ್ರಿಯಿಂದ ಬಸವಳಿದಿದೆ.
ಬಂಗಾರಪ್ಪ ಪ್ರಭಾವದಿಂದ ನಷ್ಟ: ಜಿಲ್ಲೆಯಲ್ಲಿ 1952ರಿಂದ 2009ರವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ 10 ಬಾರಿ ಗೆಲುವು ಕಂಡಿದೆ. ಆದರೆ ಸುಮಾರು ಎರಡು ದಶಕಗಳ ಕಾಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪ್ಪ ಅವರಿಂದ ಕಾಂಗ್ರೆಸ್ ಹೈರಾಣಾಯಿತು. ಅವರು ಯಾವಾಗ ಪಕ್ಷಕ್ಕೆ ಬರುತ್ತಾರೆ, ಯಾವಗ ಹೋಗುತ್ತಾರೆ ಎಂಬುದು ತಿಳಿಯದೆ ಕಾಂಗ್ರೆಸ್‌ನವರು ಕೈ ಹಿಸುಕಿಕೊಳ್ಳುವಂತಾಯ್ತು. ಅವರು ಯಾವಾಗ ಬಂದರೂ ಅವರಿಗೇ ಟಿಕೆಟ್ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಈ ರಾಜಕೀಯ ಪಲ್ಲಟಗಳ ಮಧ್ಯೆ ಕಾಂಗ್ರೆಸ್‌ನಲ್ಲಿ ಪ್ರಬಲ ಅಭ್ಯರ್ಥಿಗಳೇ ತಯಾರಾಗಲಿಲ್ಲ. ಪರಿಣಾಮವಾಗಿ ಕೈ ಶಕ್ತಿ ಕಳೆದುಕೊಂಡಿತು.
ಸಮಾಜವಾದದಿಂದಲೇ ರಾಜಕೀಯದ ಮಂಚೂಣಿಗೆ ಬಂದಿದ್ದ ಬಂಗಾರಪ್ಪ, ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು. ಯಾವಾಗ 1992ರಲ್ಲಿ ಸಿಎಂ ಪಟ್ಟ ಹೋಯಿತೋ ಅಲ್ಲಿಂದು ಶುರುವಾಯಿತು ಅವರ ರಾಜಕೀಯದಾಟ. ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಈಡಿಗ ಸಮುದಾಯದೊಂದಿಗೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತಬ್ಯಾಂಕ್ ಸೃಷ್ಟಿಸಿಕೊಂಡು ಅವರು ತೆಗೆದುಕೊಂಡ ತೀರ್ಮಾನಗಳು ಪರಿಣಾಮ ಬೀರಿದ್ದು ನೇರವಾಗಿ ಕಾಂಗ್ರೆಸ್ ಮೇಲೆ.
ಒಂದೇ ದಶಕದಲ್ಲಿ ಎರಡು ಪಕ್ಷ ಕಟ್ಟಿದ್ದು, ಮೂರು ಪಕ್ಷಗಳಿಗೆ ವಲಸೆ ಹೋದ ಬಂಗಾರಪ್ಪ, ಮಧ್ಯ ಮಧ್ಯೆ ಕಾಂಗ್ರೆಸ್‌ಗೂ ಬಂದು ಹೋದರು. 1996ರಲ್ಲಿ ತಾವೇ ಹುಟ್ಟುಹಾಕಿದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಂಗಾರಪ್ಪ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ಶಿವಪ್ಪ ನಾಲ್ಕನೇ ಸ್ಥಾನಕ್ಕೆ ಕುಸಿದರು. 1998ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮದೇ ಆದ ಕರ್ನಾಟಕ ವಿಕಾಸ ಪಾರ್ಟಿಯಿಂದ ಸ್ಪರ್ಧಿಸಿದ ಬಂಗಾರಪ್ಪ, ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ವಿರುದ್ಧ ಪರಾಭವಗೊಂಡರು. 1999ಕ್ಕೆ ಮತ್ತೆ ಕಾಂಗ್ರೆಸ್‌ಗೆ ಮರಳಿದ ಬಂಗಾರಪ್ಪ ಅದೇ ವರ್ಷ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2004ರ ವೇಳೆಗೆ ಮತ್ತೆ ಪಕ್ಷಾಂತರ ಮಾಡಿದ ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡರು. 2005ರಲ್ಲಿ ಸಮಾಜವಾಧಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದರು. 2009 ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಮರಳಿ ಮತ್ತೆ ಸ್ಪರ್ಧಿಸಿ ಸೋಲುಂಡರು.
ಆಯನೂರು ಮೇಲೇಕೆ ಸಿಟ್ಟು:ಬಿಜೆಪಿ ತೊರೆದು ವಿಜಯ ಮಲ್ಯ ನೇತೃತ್ವದಲ್ಲಿ ಜನತಾ ಪಕ್ಷ ಸೇರಿದ್ದ ಆಯನೂರು ಮಂಜುನಾಥ್ 2004ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರಿಗೆ ಟಿಕೆಟ್ ಕೂಡಾ ಸಿಕ್ಕಿತು. ಆದರೆ ಗೆಲುವು ಲಭಿಸಲಿಲ್ಲ. 2005ರ ಉಪಚುನಾವಣೆಯಲ್ಲೂ ಮತ್ತೆ ಆಯನೂರು ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ ಈ ಚುನಾವಣೆಯಲ್ಲಿ ಮತ್ತೆ ಬಂಗಾರಪ್ಪ ಗೆದ್ದರು. ಕಾಂಗ್ರೆಸ್ ತೊರೆದ ಆಯನೂರು ಮಂಜುನಾಥ್ ಮಾತೃ ಪಕ್ಷಕ್ಕೆ ಮರಳಿ ಮುಂದೆ ರಾಜ್ಯಸಭೆ ಸದಸ್ಯರಾದರು. ಬಳಿಕ ನೈಋತ್ಯ ಪದವೀಧರ ಕ್ಷೇತ್ರದಿಂದ ಗೆದ್ದು ಪರಿಷತ್ ಪ್ರವೇಶಿಸಿದರು. ಈಗ ಆಯನೂರು ಕಾಂಗ್ರೆಸ್‌ಗೆ ಎಂಟ್ರಿ ಪಡೆದರೆ ವೀರಶೈವ ಲಿಂಗಾಯತ ಸಮುದಾಯದ ನಾಯಕನೆಂಬ ಮನ್ನಣೆ ಸಿಗುತ್ತದೆ. ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ನಿಷ್ಠರಾಗಿ ಕೆಲಸ ಮಾಡಿದ ಅದೇ ಸಮುದಾಯದ ಮುಖಂಡರು ತೆರೆಮರೆಗೆ ಸರಿಯಬೇಕಾಗುತ್ತದೆ. ಲೋಕಸಭೆ ಇಲ್ಲವೇ ಪರಿಷತ್ ಚುನಾವಣೆ ಟಿಕೆಟ್ ಪಕ್ಕಾ ಮಾಡಿಕೊಂಡು ಆಯನೂರು ಕಾಂಗ್ರೆಸ್‌ಗೆ ಮರಳಿದರೆ ನಮ್ಮ ಕತೆಯೇನು ಎಂದು ಅನೇಕ ಕಾಂಗ್ರೆಸಿಗರ ಚಿಂತೆ. ಈ ಕಾರಣದಿಂದ ಆಯನೂರು ಕೆಪಿಸಿಸಿ ಹಂತದಲ್ಲಿ ಗ್ರೀನ್ ಸಿಗ್ನಲ್ ಪಡೆದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಸುಲಭವಾಗಿ ಒಪ್ಪುವಂತೆ ಕಾಣುತ್ತಿಲ್ಲ. ಎಚ್.ಸಿ.ಯೋಗೇಶ್ ನಡೆಸಿರುವ ಸುದ್ದಿಗೋಷ್ಠಿಯೇ ಇದಕ್ಕೆ ಸಾಕ್ಷಿ.
ಅಂದುಕೊಂಡಷ್ಟು ಸಲೀಸಲ್ಲ:
ರಾಜ್ಯದಲ್ಲಿ 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. 2018ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಯಿತು. 2014ರಲ್ಲಿ ಜೆಡಿಎಸ್‌ನಿಂದ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಲೋಕಸಭೆ ಟಿಕೆಟ್ ಕೊಡಿಸಿದ್ದ ಮಧು, ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಿಸಲು ಪ್ರಯತ್ನಿಸದೇ ಇರಲಾರರು. ಹೀಗಾಗಿ ಆಯನೂರು ಕಾಂಗ್ರೆಸ್ ಎಂಟ್ರಿ ಅಂದುಕೊಂಡಷ್ಟು ಸಲೀಸಲ್ಲ.