ಜಿಲ್ಲೆ

ವಿವಿ ಮುಚ್ಚುವ ನಿರ್ಧಾರ ಮರು ಪರಿಶೀಲನೆಯಾಗಲಿ

ಆರ್.ಕೃಷ್ಣ
 ಮೈಸೂರು: ರಾಜ್ಯದಲ್ಲಿ ಆರಂಭಿಸಲಾದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರದ ನಿರ್ಧಾರ ಸೂಕ್ತವಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಮಹದೇವ ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆಯನ್ನೇ ಮಾಡದೆ, ಆರ್ಥಿಕ ಸಂಪನ್ಮೂಲವನ್ನು ನೀಡದೆ ರಾಜಕೀಯ ಲಾಭಕ್ಕಾಗಿ 10 ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದೇ ಸೂಕ್ತ ನಿರ್ಧಾರವಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಾವುದೇ ಮುಂದಾಲೋಚನೆ ಇಲ್ಲದೆ ವಿವಿಗಳನ್ನು ಸ್ಥಾಪಿಸಲಾಗಿತ್ತು. ಆದರೆ ಸ್ಥಾಪನೆಗೊಂಡ ಬಳಿಕ ಅವುಗಳನ್ನು ಬಲಿಷ್ಠಗೊಳಿಸಬೇಕಾಗಿದ್ದು, ಸರ್ಕಾರದ ಕರ್ತವ್ಯವಾಗಿದೆ. ಇದರ ನಿರ್ವಹಣೆಗಾಗಿ 342 ಕೋಟಿ ರೂ. ಅನುದಾನ ಬೇಕಿದೆ. ಆ ಹಣವನ್ನು ಸರ್ಕಾರ ನೀಡುವುದರ ಮೂಲಕ ವಿವಿ ಉಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ  ಸುಮಾರು 69 ವಿವಿಗಳಿವೆ. ಇವುಗಳಲ್ಲಿ 27 ಖಾಸಗಿ, 42 ಸರ್ಕಾರಿ ವಿಶ್ವವಿದ್ಯಾಲಯಗಳಾಗಿವೆ. ಬೆಂಗಳೂರು ಒಂದರಲ್ಲಿಯೇ ಸರ್ಕಾರಿ,  ಖಾಸಗಿಯ 17 ಖಾಸಗಿ ವಿವಿ ಇವೆ. ಆದರೆ ಇಂತಹ ವಿವಿಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಸಾಮಾಜಿಕ, ಆರ್ಥಿಕ, ಹಿಂದಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಸರ್ಕಾರ ಹೊಸ ವಿವಿ ಮುಚ್ಚುವ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಕೋರಿದರು.
ಆರ್ಥಿಕ ವಿಷಯವನ್ನು ಹೊರತುಪಡಿಸಿ ಶೈಕ್ಷಣಿಕ, ಸಾಮಾಜಿಕ ಮತ್ತು ರಾಜ್ಯದ ಪ್ರಗತಿಯ ದೃಷ್ಟಿಕೋನಗಳಿಂದಲೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಧ್ಯಾಪಕರಾದ ಎಸ್.ಆರ್.ರಮೇಶ್, ಕೆ.ಪಿ.ವಾಸದೇವನ್ ಇದ್ದರು.