ಮಡಿಕೇರಿ: ಶ್ರೀ ಕೃಷ್ಣ ಗೋಶಾಲೆ ನಡೆಸಲು ದಾನಿಗಳು ಮತ್ತು ಸರ್ಕಾರ ಸಹಾಯಹಸ್ತ ನೀಡಿದ್ದಲ್ಲಿ ಮುಂದುವರೆಸುತ್ತೇವೆ. ಇಲ್ಲವಾದಲ್ಲಿ ಗೋಶಾಲೆ ಮುಚ್ಚುವುದಾಗಿ ಟ್ರಸ್ಟ್‌ನಿಂದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೋಶಾಲೆಯ ಸ್ಥಾಪಕ ಅಧ್ಯಕ್ಷ ಹರೀಶ್ ಆಚಾರ್ಯ ತಿಳಿಸಿದರು.
೨೦೧೮-೧೯ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನೆಲೆ ಕಳೆದುಕೊಂಡ ಹಲವಾರು ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ಶ್ರೀ ಕೃಷ್ಣ ಗೋಶಾಲೆ ಪ್ರಾರಂಭಿಸಲಾಯಿತು. ನಂತರ ಮಳೆ, ಚಳಿ ಹೆಚ್ಚಿರುವುದರಿಂದ ಕುಶಾಲನಗರದ ಚಿಕ್ಕತ್ತೂರು ಗ್ರಾಮಕ್ಕೆ ಶ್ರೀ ಕೃಷ್ಣ ಗೋಶಾಲೆಯನ್ನು ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಆದರೆ, ಗೋಶಾಲೆಯಲ್ಲಿರುವ ಗೋವುಗಳ ನಿರ್ವಾಹಣೆ, ಆಹಾರ, ಔಷಧ ನೀಡಲು ಸಾಕಷ್ಟು ಹಣವಿಲ್ಲದೆ ಪರದಾಡುವಂತಾಗಿದೆ. ದಾನಿಗಳು, ಸಂಘ ಸಂಸ್ಥೆಗಳು ಗೋಶಾಲೆ ನಡೆಸಲು ಮುಂದೆ ಬರಬೇಕಾಗಿದೆ. ದಾನಿಗಳು ಸಹಾಯಹಸ್ತ ನೀಡಿದ್ದಲ್ಲಿ ಮುಂದುವರೆಸುತ್ತೇವೆ. ಇಲ್ಲವಾದಲ್ಲಿ ಮುಚ್ಚಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೋಶಾಲೆಯ ಟ್ರಸ್ಟಿಗಳಾದ ಸುಮಗೋವಿಂದ್, ಪುಷ್ಪಾವತಿ, ಶೋಭರಾಧಕೃಷ್ಣ ಉಪಸ್ಥಿತರಿದ್ದರು.