ಜಿಲ್ಲೆ

ಹುಟ್ಟೂರಿನ ಋಣ ತೀರುವುದಿಲ್ಲ: ಶಾಲಾ ಕಟ್ಟಡ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಹುಟ್ಟೂರಿನಲ್ಲಿ ತಾವು ಓದಿದ ಶಾಲೆಯ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು. ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮಾರ್ಪಟ್ಟಿರುವ ಶಾಲೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ದತ್ತು ಪಡೆದಿದ್ದು, ಈಗ ಆರು ಕೊಠಡಿಗಳನ್ನು ನೂತನವಾಗಿ ನಿರ್ಮಿಸಿಕೊಟ್ಟಿದೆ.

ಶಾಲಾ ಕಟ್ಟಡ ಉದ್ಘಾಟಿಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಊರಿನ ಋಣ ಯಾವಾಗಲೂ ನನ್ನ ಮೇಲೆ ಇದ್ದೇ ಇರುತ್ತದೆ. ಅದು ಎಷ್ಟು ತೀರಿಸಿದರೂ ಮುಗಿಯುವುದಿಲ್ಲ ಎಂದರು.

ನಾನು ಐದರಿಂದ ಏಳನೇ ತರಗತಿವರೆಗೆ ಓದಿದ್ದ ನನ್ನ ಊರಿನ ಶಾಲೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ದತ್ತು ಪಡೆದಿದೆ. ಶಿಕ್ಷಣ ಇಲಾಖೆ ಸಹಯೋಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ ಎಂದರು.

ನನ್ನೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜು ಇಲ್ಲಿ ನಡೆಯುತ್ತಿದೆ. ಪದವಿ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಪದವಿ ಕೋರ್ಸು ತೆರೆದಿಲ್ಲ ಎಂದರು.

ಶಾಲಾ-ಕಾಲೇಜು ಅಲ್ಲದೆ ಇತರ ಸೌಲಭ್ಯಗಳಾದ ಬಿಸಿಎಂ ವಿದ್ಯಾರ್ಥಿ ನಿಲಯ, ಪಶು ಚಿಕಿತ್ಸಾ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಸಮುದಾಯ ಆರೋಗ್ಯ ಕೇಂದ್ರಗಳು ಇವೆ. ಆದರೆ ಸರ್ಕಾರದ ಅಭಿವೃದ್ಧಿಯನ್ನು ಕಾಣದಿರುವ ಬಿಜೆಪಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಟೀಕಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್, ಯಡಕೊಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆರ್.ಕುಸುಮಾ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್ ಆನಂದರಾವ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಶ್ಮಿ ಮಹೇಶ್, ವಿಭಾಗೀಯ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಸಹ ನಿರ್ದೇಶಕಿ ಕೆ.ರಾಜಲಕ್ಷ್ಮೀ, ಉಪನಿರ್ದೇಶಕ ಎಸ್.ಟಿ.ಜವರೇಗೌಡ, ಡಯಟ್ ಪ್ರಾಂಶಪಾಲ ಸಿ.ಆರ್.ನಾಗರಾಜಯ್ಯ, ಬಿಇಒ ಎಂ.ಪ್ರಕಾಶ, ಎಸ್‌ಡಿಎಂಸಿ(ಕೆಪಿಎಸ್) ಅಧ್ಯಕ್ಷ ಬಲರಾಮ, ಉಪ ಪ್ರಾಂಶುಪಾಲ ಜೆ.ಮಾದೇಶ್, ಮುಖ್ಯಶಿಕ್ಷಕಿ ಶಂಕರಮ್ಮ ಇತರರು ಇದ್ದರು.

--------------

ಸ್ವಂತ ಹಣದಲ್ಲಿ ಶಾಲೆಗೆ ಜಾಗ

ಸಿದ್ದರಾಮನಹುಂಡಿಯಲ್ಲಿ 1956ರಲ್ಲಿ 9 ಗುಂಟೆ ವಿಸ್ತೀರ್ಣದಲ್ಲಿ ಆರು ಕೊಠಡಿಗಳಿಂದ ಆರಂಭಗೊಂಡ ಶಾಲೆ 69 ವರ್ಷ ಪೂರೈಸಿದ್ದು, ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಉದ್ಘಾಟಿಸಿದ್ದರು ಎಂಬುವುದು ವಿಶೇಷ. ಮೇಗಳಾಪುರದಿಂದ ಎತ್ತಿನಗಾಡಿಯಲ್ಲಿ ಮುಖ್ಯಮಂತ್ರಿಗಳನ್ನು ಮೆರವಣಿಗೆ ಮೂಲಕ ಕರೆತರಲಾಗಿತ್ತು.

ಇದೇ ಶಾಲೆಯಲ್ಲಿ ಓದಿದ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿ ಅದ ಬಳಿಕ ತಮ್ಮ ಸ್ವಂತ ಹಣದಿಂದ 38 ಗುಂಟೆ ಜಾಗ ಖರೀದಿಸಿ ಶಾಲೆಗೆ ದೇಣಿಗೆ ನೀಡಿದ್ದರು. ಅಲ್ಲದೆ ಸರ್ಕಾರದಿಂದ 10 ಕೊಠಡಿಗಳ ನಿರ್ಮಾಣಕ್ಕೆ 70 ಲಕ್ಷ ರೂ., ಕಾಂಪೌಂಡ್ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡಿದ್ದಾರೆ.

ಮಕ್ಕಳಿಗೆ ಹೆಚ್ಚಿನ ಶಿಕ್ಷಣ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮಾರ್ಪಾಡು ಮಾಡಲಾಯಿತು. ಬಳಿಕ 2023-24ನೇ ಸಾಲಿನಲ್ಲಿ ಈ ಶಾಲೆಯನ್ನು ಪ್ರಧಾನಮಂತ್ರಿ ಯೋಜನೆಯಡಿ ಕರ್ನಾಟಕ ಪಬ್ಲಿಕ್ ಶಾಲೆಯು ಪಿಎಂಶ್ರೀ ಶಾಲೆಯಾಗಿ ಮಾನ್ಯತೆ ಪಡೆಯಿತು. ಇದರಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಏರಿಕೆಯಾಗಿ ಈಗ ಒಟ್ಟು 490 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಈಗ ಈ ಶಾಲೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದವರು ದತ್ತು ಪಡೆದು ಸುಸಜ್ಜಿತವಾದ 6 ಕೊಠಡಿಗಳ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಪುಸ್ತಕ, ಸಮವಸ್ತ್ರ, ಬೆಳಗಿನ ಉಪಹಾರ, ಶಿಕ್ಷಕರು, ಶಿಕ್ಷಕೇತರರು, ಕಂಪ್ಯೂಟರ್ ತಂತ್ರಜ್ಞಾನ ಸೇರಿದಂತೆ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ.

-----------

ನಡೆಯದ ಸಂವಾದ

ತಾವು ಓದಿದ ಶಾಲೆಯ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂವಾದ ನಡೆಸಲು ವಿದ್ಯಾರ್ಥಿಗಳು, ಶಿಕ್ಷಕರು ಸಿದ್ಧತೆ ನಡೆಸಿದ್ದರು.

ಇದಕ್ಕಾಗಿ ಕಳೆದೊಂದು ವಾರದಿಂದ ಸಾಮಾನ್ಯ ಜ್ಞಾನ, ಪಠ್ಯದ ಜತೆಗೆ ಸಿದ್ದರಾಮಯ್ಯ ಅವರಿಗೆ ನೆಚ್ಚಿನ ಕನ್ನಡ ವ್ಯಾಕರಣ ಕುರಿತು ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದರು.

ಆದರೆ ಕಟ್ಟಡ ಉದ್ಘಾಟನೆ ಅದ ಬಳಿಕ ಸಂವಾದಕ್ಕಾಗಿ ಸಿದ್ಧಪಡಿಸಿದ್ದ ಕೊಠಡಿಗೆ ನಿರೀಕ್ಷೆಗೂ ಮೀರಿದ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರಿಂದ ಸಿದ್ದರಾಮಯ್ಯ ಅವರು ಉದ್ಘಾಟನಾ ಭಾಷಣ, ಮಕ್ಕಳೊಂದಿಗೆ ಸಂವಾದ ಮಾಡಲು ಸಾಧ್ಯವಾಗಲಿಲ್ಲ. ಪೊಲೀಸರು, ಒಳಗೆ ಇದ್ದವರನ್ನು ಹೊರಗೆ ಕಳುಹಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಇದರಿಂದ ಕೆಲಕಾಲ ಕಾಯ್ದ ಸಿದ್ದರಾಮಯ್ಯ ಅವರು, ಭಾಷಣ, ಸಂವಾದ ಮಾಡದೆ ಮಕ್ಕಳಿಗ ಕೈ ಬೀಸಿ ಹೊರನಡೆದರು. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ನಿರಾಸೆಗೊಂಡರು.