ಜಿಲ್ಲೆ

ಮೂವರು ಕೂಲಿ ಕಾರ್ಮಿಕರು, ಎಲೆಕ್ಟ್ರೀಷಿಯನ್ ಸಾವು

ಮೈಸೂರು: ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಕೂಲಿ ಕಾರ್ಮಿಕರು ಹಾಗೂ ಒಬ್ಬರು ಎಲೆಕ್ಟ್ರೀಷಿಯನ್ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.

ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಕೂಲಿ ಕಾರ್ಮಿಕರು, ಮೇಟಗಳ್ಳಿ ವ್ಯಾಪ್ತಿಯಲ್ಲಿ ಎಲೆಕ್ಟ್ರೀಷಿಯನ್ ಮೃತಪಟ್ಟಿದ್ದಾರೆ. ವರುಣ ಹೋಬಳಿಯ ಮೇಗಳಾಪುರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಜೋಳದ ಸೋಗು ತುಂಬಿದ ಲಾರಿಗೆ ವಿದ್ಯುತ್ ಸ್ಪರ್ಶಗೊಂಡು ತಿ.ನರಸೀಪುರ ತಾಲೂಕಿನ ಹೊಸಪುರ ಗ್ರಾಮದ ನಿವಾಸಿಗಳಾದ ಮಹದೇವಸ್ವಾಮಿ(28), ಮಹಾದೇವನಾಯಕ(40), ತೇಜು(21) ಮೃತಪಟ್ಟಿದ್ದಾರೆ.

ಜೋಳದ ಸೋಗು ತುಂಬಿಕೊಂಡು ಮೈಸೂರು ನಗರದ ಪಿಂಜರಾಪೋಲ್‌ಗೆ ಬರುತ್ತಿದ್ದ ಲಾರಿಯಲ್ಲಿದ್ದ ಸೋಗಿಗೆ ಹೊಸಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿದೆ. ಈ ಸಂದರ್ಭ ಕೆಳಗಿಳಿಯುತ್ತಿದ್ದ ಮೂವರು ಕಾರ್ಮಿಕರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಲಾರಿಯಲ್ಲಿದ್ದ ಚಾಲಕ ಹಾಗೂ ಇತರ ಕಾರ್ಮಿಕರಿಗೆ ಯಾವುದೇ ರೀತಿಯ ಜೀವ ಹಾನಿ ಉಂಟಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇಟಗಳ್ಳಿ ಠಾಣೆ: ನಗರದ ಮೇಟಗಳ್ಳಿಯ ಕೆಆರ್‌ಎಸ್ ರಸ್ತೆಯ ಜೆ.ಕೆ.ಟೈರ್ಸ್ ಬಳಿ ವಿದ್ಯುತ್ ಕಂಬ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಗೊಂಡು ತಾಲೂಕಿನ ಕೋಚನಹಳ್ಳಿ ಗ್ರಾಮದ ನಿವಾಸಿ, ಎಲೆಕ್ಟ್ರೀಷಿಯನ್ ಮಹದೇವಸ್ವಾಮಿ(34) ಮೃತಪಟ್ಟಿದ್ದಾರೆ.

ಮಳೆಯಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ದುರಸ್ತಿ ಕಾಮಗಾರಿಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಗುತ್ತಿಗೆ ನೀಡಿತ್ತು. ಗುತ್ತಿಗೆದಾರ ಪ್ರಭು ಕಾಮಗಾರಿ ವಹಿಸಿಕೊಂಡಿದ್ದರು. ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಅವರೊಂದಿಗಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.