ಜಿಲ್ಲೆ

ಸಾವಿನ ಘಟನೆ ಉನ್ನತ ತನಿಖೆಯಾಗಲಿ: ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹ

ಮೈಸೂರು: ಯರಗನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿರುವ ಒಂದೇ ಕುಟುಂಬದ ನಾಲ್ವರ ಸಂಶಯಾಸ್ಪದ ಸಾವಿನ ಘಟನೆ ಉನ್ನತ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಸಂದೇಶ್‌ಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೃತರಾದ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಮಂಜುಳಾ, ಪುತ್ರಿಯರಾದ ಅರ್ಚನಾ ಹಾಗೂ ಸ್ವಾತಿ ಅವರೊಂದಿಗೆ ವಾರದ ಹಿಂದೆ ಚಿಕ್ಕಮಗಳೂರಿನ ಮದುವೆಗೆ ತೆರಳಿ ಭಾನುವಾರವಷ್ಟೆ ಮೈಸೂರಿಗೆ ಆಗಮಿಸಿದ್ದರು. ಆದರೆ, ಮರು ದಿನವೇ ಇಂತಹ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಆಕಸ್ಮಿಕ ಘಟನೆಯೇ? ಕುಟುಂಬದವರೇ ಮಾಡಿಕೊಂಡಿರುವ ಆತ್ಮಹತ್ಯೆಯೇ? ಅಥವಾ ಪೂರ್ವ ನಿಯೋಜಿತ ಹತ್ಯೆಯೇ? ಎಂಬುವ ಅನುಮಾನಗಳು ಚರ್ಚಿತವಾಗುತ್ತಿವೆ ಎಂದು ಸ್ಥಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಡುಗೆ ಅನಿಲ ಸೋರಿಕೆಯಿಂದ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಮೃತರು ಬಳಸುತ್ತಿದ್ದ ಇಸ್ತ್ರಿ ಪೆಟ್ಟಿಗೆಗೆ ಅಳವಡಿಸಿದ್ದ ಅನಿಲವು ಹೊರಸೂಸುವಿಕೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಯಾವುದೇ ಅನಿಲವಾಗಲಿ ಅದರ ವಾಸನೆಯ ಘಾಟು ಮೂಗಿಗೆ ಬಡಿದು ನಿದ್ರಿಸುವವರನ್ನು ಎಚ್ಚರಿಸಬಲ್ಲದು. ಮಲಗಿದ್ದ ನಾಲ್ವರಲ್ಲಿ ಯಾರಿಗೂ ಜೋರಾದ ಕೆಮ್ಮು ಬಾರದೆ, ಯಾರೊಬ್ಬರು ಅಲ್ಲಿಂದ ಹೊರ ಬರಲು ಪ್ರಯತ್ನಿಸದೆ, ಮಲಗಿದ್ದ ಜಾಗದಲ್ಲಿಯೇ ಸತ್ತಿರುವುದು ಶೋಚನೀಯ ಸಂಗತಿ ಎಂದರು.
ಎನ್.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜು, ಪ್ರಧಾನ ಕಾರ್ಯದರ್ಶಿ ಮಂಜುಶ್ರೀಗೌಡ, ಮಾಜಿ ಅಧ್ಯಕ್ಷ ಸು.ಮುರಳಿ, ಮುಖಂಡ ರಮೇಶ್ ಇತರರಿದ್ದರು.