ಜಿಲ್ಲೆ

ರಾಜ್ಯ ಗುತ್ತಿಗೆದಾರರ ಸಂಘ ನೀಡಿದ್ದ ಗಡುವು ಅಂತ್ಯ: 7 ಸಚಿವರ ಪೈಕಿ ಇಬ್ಬರು ಮಾತ್ರ ಸ್ಪಂದನೆ

ಬೆಂಗಳೂರು: ಬಾಕಿ ಉಳಿದಿರುವ ಅಂದಾಜು 30 ಸಾವಿರ ಕೋಟಿ ರೂ.ಗಿಂತ ಅಧಿಕ ಕಾಮಗಾರಿಗಳ ಬಿಲ್​ಗಳಿಗೆ ಹಣ ಪಾವತಿಸುವುದೂ ಸೇರಿ ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ರಾಜ್ಯ ಗುತ್ತಿಗೆದಾರರ ಸಂಘ, ಡಿಸಿಎಂ ಡಿಕೆಶಿ ಸೇರಿ 7 ಸಚಿವರಿಗೆ ಪತ್ರ ಬರೆದು ನೀಡಿದ್ದ ಗಡುವು ಅಂತ್ಯಗೊಂಡಿದ್ದು, ಈವರೆಗೆ ಇಬ್ಬರು ಸಚಿವರು ಮಾತ್ರ ಜ.23ರಂದು ಗುತ್ತಿಗೆದಾರರ ಜತೆ ಸಭೆ ನಡೆಸಲು ಸಮ್ಮತಿಸಿದ್ದಾರೆ.

ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್​, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆ ಸಚಿವ ಪ್ರಿಯಾಂಕ್​ ಖರ್ಗೆ, ವಸತಿ ಸಚಿವ ಜಮೀರ್​ ಅಹ್ಮದ್​, ಸಣ್ಣ ನೀರಾವರಿ ಸಚಿವ ಎನ್​.ಎಸ್​.ಬೋಸರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್​ ಗುಂಡೂರಾವ್​, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್​.ಸಿ.ಮಹದೇವಪ್ಪ ಮತ್ತು ಪೌರಾಡಳಿತ ಸಚಿವ ರಹೀಂಖಾನ್​ ಅವರಿಗೆ ಜ.9ರಂದು ಪತ್ರ ಸಂಘ ಪತ್ರ ಬರೆದಿತ್ತು. ಈ ಪತ್ರ ತಲುಪಿದ 7 ದಿನದೊಳಗೆ ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ತಮ್ಮ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆಯಬೇಕೆಂದು 7 ಸಚಿವರಿಗೆ ಗಡುವು ಕೊಟ್ಟಿತ್ತು. ಆದರೆ, ಜ.17ರಂದೇ ಸಚಿವರಿಗೆ ನೀಡಿದ್ದ ಗಡುವು ಮುಗಿದಿದ್ದು, ಪ್ರಿಯಾಂಕ್​ ಖರ್ಗೆ ಮತ್ತು ಎನ್​.ಎಸ್​.ಬೋಸರಾಜು ಮಾತ್ರ ಗುತ್ತಿಗೆದಾರರ ಮನವಿಗೆ ಸ್ಪಂದಿಸಿದ್ದಾರೆ.

ಸಂಘದ ಅಧ್ಯಕ್ಷ (ಪ್ರಭಾರ) ಜಗನ್ನಾಥ್​ ಬಿ.ಶೇಗಜಿ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸದ ಸಚಿವರಿಗೆ ಇನ್ನಷ್ಟು ಕಾಲಾವಕಾಶ ನೀಡಲಾಗುವುದು. ಹಲವು ವರ್ಷಗಳಿಂದ ಬಿಲ್​ಗಳಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಜ್ಯೇಷ್ಠತೆ ಆಧಾರದ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

24ಕ್ಕೆ ಕಾರ್ಯಕಾರಿ ಸಮಿತಿ ಸಭೆ

ಚಾಮರಾಜಪೇಟೆ 5ನೇ ಮುಖ್ಯ ರಸ್ತೆಯಲ್ಲಿರುವ ಗುತ್ತಿಗೆದಾರರ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಜ.24) ಬೆಳಗ್ಗೆ 11ಕ್ಕೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಅಷ್ಟರೊಳಗೆ ಎಲ್ಲ ಸಚಿವರು ಬಾಕಿ ಬಿಲ್​ಗಳಿಗೆ ಹಣ ಪಾವತಿಸುವ ಕುರಿತು ಸ್ಪಂದಿಸದಿದ್ದರೆ ಸಭೆಯಲ್ಲಿ ಮುಂದಿನ ಹೋರಾಟದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಸಂಘದ

ಮೂಲಗಳು ತಿಳಿಸಿವೆ.

ಸಚಿವರಾದ ಪ್ರಿಯಾಂಕ್​ ಖರ್ಗೆ ಮತ್ತು ಎನ್​.ಎಸ್​.ಬೋಸರಾಜು ಮಾತ್ರ ನಮ್ಮ ಪತ್ರಕ್ಕೆ ಸ್ಪಂದಿಸಿ ಗುತ್ತಿಗೆದಾರರ ಜತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ಉಳಿದ ಸಚಿವರೂ ಸಹ ನಮ್ಮ ಮನವಿಗೆ ಸ್ಪಂದಿಸುವ ಅಚಲ ವಿಶ್ವಾಸ ಇದೆ. ಅದಕ್ಕಾಗಿ ಇನ್ನಷ್ಟು ಕಾಲಾವಕಾಶ ನೀಡುತ್ತೇವೆ.

|ಜಿ.ಎಂ.ರವೀಂದ್ರ. ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ.