ಸವಣೂರ: ಸ್ಥಳೀಯ ಶಾಸಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಳೆದ 20 ವರ್ಷಗಳಿಂದ ಕ್ಷೇತ್ರದ ರೈತರ ಸಮಸ್ಯೆಯನ್ನು ಆಲಿಸಿ, ಶಾಶ್ವತ ಪರಿಹಾರ ನೀಡದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಬುಧವಾರ ಪಟ್ಟಣದ ಉಪ ವಿಭಾಗದ ಕಚೇರಿ ಎದುರು ಹಮ್ಮಿಕೊಂಡಿದ್ದ ಬೃಹತ್ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
2000ರಲ್ಲಿ ನೀರಿಗಾಗಿ ನಡೆದ ಪ್ರತಿಭಟನೆಯಲ್ಲಿ ಕಂದಾಯ ಕಚೇರಿಗೆ ಬೆಂಕಿ ಬಿದ್ದು, ರೈತರ ಮಹತ್ವದ ದಾಖಲಾತಿಗಳು ಸುಟ್ಟು ಹೋಗಿವೆ. ಸವಣೂರ, ಶಿಗ್ಗಾಂವಿ ತಾಲೂಕಿನ ರೈತರು ಸೂಕ್ತ ದಾಖಲಾತಿಗಾಗಿ ಪರದಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ವಿಶೇಷ ಯೋಜನೆ ರೂಪಿಸಿ ದಾಖಲಾತಿಗಳನ್ನು ಮರುಸೃಷ್ಟಿಸಬೇಕು. ಬೆಳೆ ವಿಮೆ ವಿತರಣೆ, ಕೆರೆ ಹೂಳು ಎತ್ತುವುದು ಸೇರಿದಂತೆ ರೈತರ ಬೇಡಿಕೆಗಳ ಚರ್ಚೆಗೆ ಸಭೆ ಕರೆದು, ಪರಿಹಾರ ಸೂಚಿಸಬೇಕು. ತಪ್ಪಿದಲ್ಲಿ ಕ್ಷೇತ್ರದ ರೈತರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸ್ಥಳಕ್ಕೆ ಭೇಟಿ ನೀಡಿ, ರೈತರ ದಾಖಲಾತಿ ಮರುಸೃಷ್ಟಿಗೆ ಮೂರುದಿನಗಳ ಹಿಂದೆಯೇ ಆದೇಶಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾಗುವುದು. ಬೆಳೆವಿಮೆಯನ್ನು ಹಂತ ಹಂತವಾಗಿ ವಿತರಿಸಲಾಗುವುದು. ಬೆಂಕಿಗೆ ಆಹುತಿಯಾಗಿರುವ ದಾಖಲಾತಿ ಮರುಸೃಷ್ಟಿಗೆ ಮೂರುದಿನಗಳ ಹಿಂದೆಯೇ ಆದೇಶ ಮಾಡಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಗಡುವು ನೀಡಿ ಪ್ರತಿಭಟನೆ ಹಿಂಪಡೆದರು.
ಇದಕ್ಕೂ ಮೊದಲು ಪಟ್ಟಣದ ಪರಿವೀಕ್ಷಣ ಮಂದಿರದಿಂದ ಮೆರವಣಿಗೆ ಹೊರಟು, ಡಾ. ವಿ.ಕೃ. ಗೋಕಾಕ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಶುಕ್ರವಾರ ಪೇಟೆ, ಭರಮಲಿಂಗೇಶ್ವರ ಸರ್ಕಲ್, ಮುಖ್ಯ ಮಾರುಕಟ್ಟೆ ಮೂಲಕ ಸಂಚರಿಸಿ ಉಪ ವಿಭಾಗಾಧಿಕಾರಿ ಕಾರ್ಯಾಲಯದ ಎದುರು ಆಗಮಿಸಿತು.
ರಾಜ್ಯ ಕಾರ್ಯದರ್ಶಿ ಮಾಲತೇಶ ಪೂಜಾರ, ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣವರ, ಪದಾಧಿಕಾರಿಗಳಾದ ರಾಘವೇಂದ್ರ ನಾಯಕ್, ಹಾಸೀಂ ಜಿಗಳೂರ, ಶೇಖರ ಅಂಗಡಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ನೂರಅಹ್ಮದ ಮುಲ್ಲಾ, ತಾಲೂಕು ಘಟಕ ಅಧ್ಯಕ್ಷ ಚನ್ನಪ್ಪ ಮರಡೂರ, ಪದಾಧಿಕಾರಿಗಳಾದ ಜಾಕೀರ ಹುಸೇನ್, ಬಸವರಾಜ ತಳವಾರ, ಜಗದೀಶ ಬಳ್ಳಾರಿ, ಎಂ.ಎನ್. ನಾಯಕ್, ರಾಜೂ ತರ್ಲಘಟ್ಟ, ಮುತ್ತು ಗುಡಗೇರಿ, ಮಹಾದೇವಪ್ಪ ಮಾಳಮ್ಮನವರ, ಬಸಲಿಂಗ ನರಗುಂದ, ಶಿವಾನಂದ ಕರಿಗಾರ, ಶಿವಪುತ್ರಪ್ಪ ಸಪ್ಪಗಾಯಿ, ರಮೇಶ ದೊಡ್ಡೂರ, ಫಕೀರಪ್ಪ ಜೋಗೇರ, ನಾಗಪ್ಪ ಹಡಪದ, ರವಿ ದೊಡ್ಡಮನಿ, ಖುತಬಸಾಬ್ ಕುಂದೂರ, ಬಸವನಗೌಡ ಅರಳಿಹಳ್ಳಿ, ಜಾಕೀರ ಅರಳಿಮರದ, ಶಿವಾನಂದ ವಾಲೇಕಾರ, ರಾಘವೇಂದ್ರ ಕುರಬರ ಹಾಗೂ ಇತರರು ಪಾಲ್ಗೊಂಡಿದ್ದರು.