ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಕೊಡಗು ಜಿಲ್ಲೆಯ ಸರ್ಕಾರಿ ನೌಕರ ಕೆ.ಎ.ಅರುಣ್ ಕುಮಾರ್ ಮೃತದೇಹ ಶೋಧ ಕಾರ್ಯದಲ್ಲಿ ತೊಡಗಿದ್ದ ವಿವಿಧ ತಂಡದವರು. 
ಜಿಲ್ಲೆ

ನೌಕರ ಅರುಣ್‌ಕುಮಾರ್ ಮೃತದೇಹ ಪತ್ತೆ

ಲೋಕೇಶ್ ಮನು. ಡಿ

ಕುಶಾಲನಗರ: ಕೊಡಗು-ಮೈಸೂರು ಗಡಿಯಲ್ಲಿರುವ ಕಾವೇರಿ ಸೇತುವೆ ಮೇಲಿನಿಂದ ನದಿಗೆ ಹಾರಿದ್ದ ಕೊಡಗು ಜಿಲ್ಲೆಯ ಸರ್ಕಾರಿ ನೌಕರ ಕೆ.ಎ.ಅರುಣ್ ಕುಮಾರ್ ಮೃತದೇಹ ಸೋಮವಾರ ಪತ್ತೆಯಾಗಿದೆ.


ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಎಫ್‌ಡಿಎಯಾಗಿದ್ದ ಅರುಣ್‌ಕುಮಾರ್ ಜು.24ರಂದು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದರು. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಮೃತದೇಹ ಪತ್ತೆಯಾಗಿರಲಿಲ್ಲ. ಕಳೆದ ಆರು ದಿನಗಳಿಂದ ನಿರಂತರ ಕಾವೇರಿ ನದಿಯಲ್ಲಿ ಪೊಲೀಸ್ ಇಲಾಖೆ, ಎನ್‌ಡಿಆರ್‌ಎಫ್, ದುಬಾರೆ ರೀವರ್ ರ‌್ಯಾಫ್ಟ್, ಅಗ್ನಿಶಾಮಕ, ತುರ್ತು ಸೇವೆಗಳ ತಂಡಗಳು ಶೋಧ ಕಾರ್ಯಾಚರಣೆ ನಡೆಸಿದ್ದವು. ನದಿಗೆ ಹಾರಿದ್ದ ಸ್ಥಳದಿಂದ ಐದಾರು ಕಿ.ಮೀ. ದೂರದಲ್ಲಿ ಮುಳ್ಳುಸೋಗೆ- ಕೂಡ್ಲೂರು ಗ್ರಾಮದ ನಡುವಿನ ಕಾವೇರಿ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿದೆ.


ಕುಶಾಲನಗರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರಿಗೆ ಹಸ್ತಾಂತರ ಮಾಡಲಾಯಿತು

ಈ ಸಂದರ್ಭದಲ್ಲಿ ಡಿವೈಎಸ್ಪಿ ಗಂಗಾಧರಪ್ಪ, ಕುಶಾಲನಗರ ನಿರೀಕ್ಷಕ ಪ್ರಕಾಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಠಾಣಾಧಿಕಾರಿಗಳಾದ ಚಂದ್ರಶೇಖರ್, ಮೋಹನ್ ರಾಜ್ ಸೇರಿದಂತೆ ಶೋಧ ಕಾರ್ಯದಲ್ಲಿ ತೊಡಗಿದ್ದ ವಿವಿಧ ತಂಡದವರು ಹಾಜರಿದ್ದರು.