ಮೈಸೂರು : ಮಾನಕ್ಕೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿದ್ದ ಕೆ.ಆರ್.ನಗರ ಚಂದಗಾಲು ಗ್ರಾಮದ ಮಹದೇವನಾಯಕ(65) ಅವರ ಅಂತಿಮ ಸಂಸ್ಕಾರಕ್ಕೂ ಮುನ್ನವೇ ಅವರ ಪುತ್ರಿ ಲೀಲಾವತಿ(34) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ.
ಚೀರ‌್ನಹಳ್ಳಿ ಗ್ರಾಮದ ಲೋಕೇಶ್ ಬೆದರಿಕೆಯಿಂದ ಮಾನಕ್ಕೆ ಅಂಜಿದ ಕುಟುಂಬದ ನಾಲ್ವರು ಶುಕ್ರವಾರ ಬೆಳಗ್ಗೆ ಮಹದೇಶ್ವರ ಬೆಟ್ಟದ ತಾಳು ಬೆಟ್ಟಕ್ಕೆ ತೆರಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಕ್ರಿಮಿನಾಶಕ ಕುಡಿದಿದ್ದರು. ಶನಿವಾರ ಮಹದೇವನಾಯಕ ಮೃತಪಟ್ಟಿದ್ದರು. ಸ್ಥಳೀಯರ ನೆರವಿನಿಂದ ಉಳಿದವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಭಾನುವಾರ ಮಹದೇವನಾಯಕ ಅವರ ಮೃತ ದೇಹವನ್ನು ಸ್ವಗ್ರಾಮವಾದ ತಾಲೂಕಿನ ಚಂದಗಾಲು ಗ್ರಾಮಕ್ಕೆ ತರಲಾಗಿತ್ತು. ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೆ ಮನೆಯ ಬಳಿ ಇಡಲಾಗಿತ್ತು. ಇತ್ತ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹದೇವನಾಯಕ ಅವರ ಪುತ್ರಿ ಲೀಲಾವತಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮುಂಜಾನೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಸಂಜೆ ಚಂದಗಾಲು ಗ್ರಾಮಕ್ಕೆ ತಂದು ತಂದೆ ಮತ್ತು ಮಗಳ ಅಂತ್ಯಸಂಸ್ಕಾರವನ್ನು ಒಟ್ಟಿಗೆ ಮಾಡಲಾಯಿತು.
ಸಚಿವರು ಮತ್ತು ಶಾಸಕರ ಭೇಟಿ:
ಚಿಕಿತ್ಸೆಗೆ ಸ್ಪಂದಿಸದೆ ಲೀಲಾವತಿ ಮೃತಪಟ್ಟಿರುವ ವಿಷಯ ತಿಳಿದು ಚಾಮರಾಜನಗರದ ಜಿಲ್ಲಾ ಆಸ್ಪತ್ರೆಗೆ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲದೆ ಚಿಕಿತ್ಸೆ ಪಡೆಯುತ್ತಿರುವ ಅಜ್ಜಿ ಮತ್ತು ಮೊಮ್ಮಗಳ ಆರೋಗ್ಯವನ್ನೂ ವಿಚಾರಿಸಿ ಅವರಿಗೆ ಧೈರ್ಯ ತುಂಬಿದರು. ಆಸ್ಪತ್ರೆಯ ವೈದ್ಯರೊಂದಿಗೆ ಅವರ ಆರೋಗ್ಯದ ಸ್ಥಿತಿ ಬಗ್ಗೆ ಚರ್ಚಿಸಿ ಹೆಚ್ಚಿನ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು.
ಇದೊಂದು ಅಮಾನವೀಯ ಘಟನೆಯಾಗಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಆ ಮೂಲಕ ಸಮಾಜದಲ್ಲಿ ಇಂತಹ ದುಷ್ಪ ಶಕ್ತಿಗಳನ್ನು ದಮನ ಮಾಡಬೇಕಿದೆ. ನೊಂದ ಕುಟುಂಬ ಈ ಆಘಾತದಿಂದ ಆದಷ್ಟು ಬೇಗ ಹೊರಬರಲಿ. ಮುಂದಿನ ದಿನಗಳಲ್ಲಿ ಈ ಕುಟುಂಬದ ಸಂಪೂರ್ಣ ರಕ್ಷಣೆ ನನ್ನ ಜವಾಬ್ದಾರಿಯಾಗಿರುತ್ತದೆ ಎಂದು ಭರವಸೆ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕ ಪುಟ್ಟರಂಶೆಟ್ಟಿ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತು ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಸಾ.ರಾ.ಮಹೇಶ್ ತರಾಟೆ :
ಸೋಮವಾರ ಚಂದಗಾಲು ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಹದೇವನಾಯಕ ಅವರ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮತ್ತು ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಚೆಕ್ ಹಸ್ತಾಂತರ: ತಾಲೂಕು ಆಡಳಿತ ಪರವಾಗಿ ನೊಂದ ಕುಟುಂಬಕ್ಕೆ ತಲಾ 4,12,500 ರೂ. ಚೆಕ್‌ಗಳನ್ನು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಮಹದೇವನಾಯಕ ಮತ್ತು ಲೀಲಾವತಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು. ಮುಂದಿನ ದಿನಗಳಲ್ಲಿ ಬಾಕಿ ಪರಿಹಾರದ ಮೊತ್ತವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.