ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ದಸರಾ ಗಜಪಡೆ ಭಾನುವಾರ ಅರಮನೆ ಆವರಣವನ್ನು ಪ್ರವೇಶಿಸಲಿದೆ.
ಹುಣಸೂರು ತಾಲೂಕಿನ ವೀರನಹೊಸಳ್ಳಿ ಗ್ರಾಮದಲ್ಲಿ ಆ.4 ರಂದು ಗಜಪಯಣಕ್ಕೆ ಚಾಲನೆ ದೊರೆಯಿತು. ಅಂದು ವೀರನಹೊಸಳ್ಳಿ ಯಿಂದ ಹೊರಟ ಗಜಪಡೆ ಸಂಜೆ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಆಗಮಿಸಿ ಬೀಡುಬಿಟ್ಟಿತ್ತು. ಮೊದಲ ತಂಡದಲ್ಲಿ ಅಂಬಾರಿ ಆನೆ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ದುಬಾರೆ ಆನೆ ಶಿಬಿರದ ಪ್ರಶಾಂತ, ಧನಂಜಯ, ಕಂಜನ್, ಕಾವೇರಿ, ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಏಕಲವ್ಯ, ಬಳ್ಳೆ ಆನೆ ಶಿಬಿರದ ಲಕ್ಷ್ಮೀ ಆನೆಗಳು ನಗರಕ್ಕೆ ಆಗಮಿಸಿವೆ. ಕೆಲವು ದಿನಗಳ ನಂತರ ಎರಡನೇ ತಂಡದ ಆನೆಗಳು ಸಹ ಆಗಮಿಸಲಿವೆ.
ಅಭಿಮನ್ಯು ನೇತೃತ್ವದ ಗಜಪಡೆ ಭಾನುವಾರ ಮಧ್ಯಾಹ್ನ 3.30ಕ್ಕೆ ಅರಣ್ಯ ಭವನದಿಂದ ಹೊರಟು ಅರಮನೆ ಆವರಣವನ್ನು ಪ್ರವೇಶಿ ಸಲಿದ್ದು, ಅರಮನೆ ಆವರಣದಲ್ಲಿ ಅರಮನೆ ಮಂಡಳಿಯಿಂದ ಆನೆಗಳಿಗೆ ಭವ್ಯವಾದ ಸ್ವಾಗತ ದೊರೆಯಲಿದೆ. ಆನೆಗಳಿಗೆ ಸಾಂಪ್ರದಾ ಯಿಕ ಪೂಜೆ ಸಲ್ಲಿಸಿದ ಬಳಿಕ ಪುಷ್ಪಾರ್ಚನೆ ಹಾಗೂ ಪುಷ್ಪವೃಷ್ಟಿಯ ಮೂಲಕ ಆನೆಗಳನ್ನು ಅರಮನೆ ಆವರಣಕ್ಕೆ ಬರ ಮಾಡಿಕೊಳ್ಳಲಾಗು ವುದು. ಈ ಸಂದರ್ಭ ಪೊಲೀಸ್ ತಂಡದಿಂದ ಗಜಪಡೆಗೆ ಗೌರವ ವಂದನೆ ಸಲ್ಲಿಸಲಾಗುವುದು. ಅಲ್ಲದೆ, ಪೊಲೀಸ್ ವಾದ್ಯವೃಂದ, ಅಶ್ವರೋಹಿ ದಳ, ನಾದಸ್ವರ, ಪೂರ್ಣಕುಂಭ ಮೆರಗು ನೀಡಲಿದೆ.
ಅರ್ಚಕರಾದ ಪ್ರಹ್ಲಾದ್ ರಾವ್ ಆನೆಗಳಿಗೆ ಪೂಜೆ ಸಲ್ಲಿಸಲಿದ್ದಾರೆ. ಶುಭ ಮುಹೂರ್ತದಲ್ಲಿ ಆನೆಗಳ ಪಾದ ತೊಳೆದು ಪಾದ ಪೂಜೆ ಮತ್ತು ಶೋಡಶೋಪಾಚಾರ ಪೂಜೆ ನೆರವೇರಿಸಲಾಗುವುದು. ನಂತರ ಆನೆಗಳಿಗೆ ಇಷ್ಟವಾದ ಪಂಚಫಲಗಳನ್ನು ಇಟ್ಟು ಪೂಜೆ ಸಲ್ಲಿಸಲಾಗುವುದು. ಆ ನಂತರ ಆನೆಗಳಿಗೆ ಬೆಲ್ಲ, ಕಬ್ಬು, ಹಣ್ಣು ಹಂಪಲುಗಳನ್ನು ನೀಡಲಾಗುವುದು.
ಸೋಮವಾರದಿಂದ ತಾಲೀಮು: ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆಯಲು ಆನೆಗಳಿಗೆ ತಾಲೀಮು ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಭಾನುವಾರ ಆನೆಗಳು ಅರಮನೆ ಆವರಣ ಪ್ರವೇಶಿಸಿದ ನಂತರ ಸೋಮವಾರದಿಂದಲೇ ತಾಲೀಮು ಪ್ರಾರಂಭಗೊಳ್ಳಲಿದೆ. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ವೇ ಬ್ರಿಡ್ಜ್‌ಗೆ ಆನೆಗಳನ್ನು ತೂಕ ಪರೀಕ್ಷೆಗೆ ಕರೆದೊಯ್ಯುವ ಮೂಲಕ ಆನೆಗಳ ತಾಲೀಮು ಪ್ರಾರಂಭಗೊಳ್ಳಲಿದೆ. ಆನೆಗಳ ತೂಕವನ್ನು ಪರೀಕ್ಷೆಯ ಆಧಾರದ ಮೇಲೆ ಆನೆಗಳ ಆರೋಗ್ಯ ವೃದ್ಧಿಗೆ ಪೂರಕವಾದ ಆಹಾರವನ್ನು ನೀಡಲಾಗುವುದು.