ಜಿಲ್ಲೆ

ದುರಸ್ತಿ ಸಮಯದಲ್ಲೇ ಪ್ರವಹಿಸಿದ ವಿದ್ಯುತ್ ಕೂದಲೆಳೆ ಅಂತರದಲ್ಲಿ ತಪ್ಪಿದ ಅಪಾಯ!

ರೋಣ: ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆ ತಾಲೂಕಿನ ಹಲವು ಕಡೆ ಅವಾಂತರ ಸೃಷ್ಟಿಸಿದೆ. ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಡಿತಗೊಂಡ ವಿದ್ಯುತ್ ಸಂಪರ್ಕ ಭಾನುವಾರ ಸರಿಪಡಿಸುತ್ತಿದ್ದ ಆರು ಲೈನ್​ವುನ್​ಗಳು ಬಹು ದೊಡ್ಡ ಅವಘಡದಿಂದ ಪಾರಾಗಿದ್ದಾರೆ.

ಶನಿವಾರ ಮಳೆ ಗಾಳಿಯಿಂದ ಪಟ್ಟಣದ ಕೆಲವೆಡೆ ವಿದ್ಯುತ್ ಕಂಬಗಳಲ್ಲಿ ತೊಂದರೆ ಉಂಟಾಗಿದ್ದು, ಭಾನುವಾರ ಲೈನ್​ವುನ್​ಗಳು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನು ಗಮನಿಸದ ರೋಣದ 110 ಕೆ.ವಿ ಸ್ಟೇಷನ್​ನ ಕಿರಿಯ ಇಂಜಿನಿಯರ್(ಜೆ.ಇ) ಏಕಾಏಕಿ ವಿದ್ಯುತ್ ಹರಿಸಲು ಪ್ರಾರಂಭಿಸಿದ್ದು, ಮುದೇನಗುಡಿ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಲೈನ್​ವುನ್ ಹಾಗೂ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕರಿಯಪ್ಪ ಮಡಿವಾಳರ, ರಮೇಶ ಕುಲಗೌಡ್ರ, ಸಂಗು ಕಿರೇಸೂರ, ಜೆ.ಎಸ್. ಮುಗ್ಗಜೋಳ, ಆರ್.ಎಸ್. ಚಿಕ್ಕನಗೌಡ್ರ, ಹನುಮಂತ ಅವರು ಎಫ್ 4 ಮತ್ತು ಎಫ್ 6 ಎಲ್.ಸಿ (ಲೈನ್ ಕ್ಲಿಯರೆನ್ಸ್) ತೆಗೆದುಕೊಂಡು ರಿಪೇರಿ ಕಾರ್ಯದಲ್ಲಿ ತೊಡಗಿದ್ದರು. ಜೆ.ಇ ಬಸವರಾಜ ಜಾಲಿಹಾಳ ಅವರು ಇದನ್ನು ಗಮನಿಸದೆ ಏಕಾಏಕಿ ವಿದ್ಯುತ್ ಪ್ರಾರಂಭಿಸಿ ಆತಂಕದ ಸ್ಥಿತಿ ಸೃಷ್ಟಿಸಿದ್ದರು. ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಸಣ್ಣ ಪ್ರಮಾಣದಲ್ಲಿ ಲೈನ್​ವುನ್​ಗಳಿಗೆ ಶಾಕ್ ತಗುಲಿದೆ. ಇದರಿಂದ ಎಚ್ಚರಗೊಂಡ ಎಲ್ಲರೂ ದುರಸ್ತಿ ನಿಲ್ಲಿಸಿ, ಆ ಸ್ಥಳದಿಂದ ಕೂಡಲೇ ದೂರ ಸರಿದು ಅಪಾಯದಿಂದ ಪಾರಾಗಿದ್ದಾರೆ.

ಜೆಇ ವಿರುದ್ಧ ಆಕ್ರೋಶ: ಘಟನೆಯಿಂದ ಆಕ್ರೋಶಗೊಂಡ ಸಿಬ್ಬಂದಿ ಹಾಗೂ ಜೆ.ಇ ಅವರ ನಡುವೆ ಕೆಲ ಗಂಟೆ ಮಾತಿನ ಚಕಮಕಿ ನಡೆಯಿತು. ‘ನಿಮ್ಮ ನಿರ್ಲಕ್ಷ್ಯದಿಂದ ನಮ್ಮ ಪ್ರಾಣ ಹೋಗಿದ್ದರೆ ಯಾರು ಹೊಣೆ?. ನಮ್ಮ ಕುಟುಂಬದವರ ಪರಿಸ್ಥಿತಿ ಏನಾಗುತ್ತಿತ್ತು’ ಎಂದು ಲೈನ್​ವುನ್​ಗಳು ಆಕ್ರೋಶ ವ್ಯಕ್ತಪಡಿಸಿದರು. ‘ನಾವು ಎಲ್​ಸಿ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿರುವುದು ನಿಮ್ಮ ಗಮನಕ್ಕೆ ಇರಲಿಲ್ಲವೆ. ಏಕೆ ವಿದ್ಯುತ್ ಆರಂಭಿಸಿದಿರಿ’ ಎಂದು ತೀವ್ರ ವಾಗ್ವಾದ ನಡೆಸಿ, ಜೆಇ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೋಣದ ಮುದೇನಗುಡಿ ರಸ್ತೆಯಲ್ಲಿ ನಡೆದ ಅವಘಡದ ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಲಾಗಿದೆ. ಸೋಮವಾರ ಭೇಟಿ ನೀಡಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. | ರಾಘವೇಂದ್ರ ಸಾಲ್ಮನಿ, ಹೆಸ್ಕಾಂ ಎಇಇ ರೋಣ