ಜಿಲ್ಲೆ

ಕರೊನಾ ಜಾಗೃತಿಗಾಗಿ ಪೊಲೀಸರ ಡಾನ್ಸ್: ರಾಜರಾಜೇಶ್ವರಿನಗರ ಠಾಣೆ ಪೊಲೀಸರಿಂದ ನೂತನ ಪ್ರಯತ್ನ

ಬೆಂಗಳೂರು: ಕರೊನಾ ಸೋಂಕು ಕುರಿತು ಜನರಲ್ಲಿ ಜಾಗೃತಿ ಮೂಡಿಸು ವಲ್ಲಿ ನಾನ ಪ್ರಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಕರೊನಾ ಗೀತೆಗೆ ಹೆಜ್ಜೆಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಸ್ತೆ ಮೇಲೆ ರಂಗೋಲಿ, ಫೋಸ್ಟರ್ ಪ್ರದರ್ಶನ, ಕರಪತ್ರ ವಿತರಣೆ, ಮೈಕ್​ನಲ್ಲಿ ಜಾಗೃತಿ, ಗೀತೆ ರಚನೆ, ನಾಟಕ ಹೀಗೆ ನಾನ ಸ್ವರೂಪದಲ್ಲಿ ಜನರಲ್ಲಿ ಕರೊನಾ ಕುರಿತು ಅರಿವು ಮೂಡಿಸುತ್ತಲೇ ಇದ್ದಾರೆ.

ಸಂಗೀತ ಸಂಯೋಜಕ ಗುರುಕಿರಣ್ ಅವರು ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಹಾಡಿಗೆ ಧ್ವನಿಗೂಡಿಸಿದ್ದರು. ಆ ಹಾಡನ್ನು ಠಾಣಾಧಿಕಾರಿ ತಮ್ಮ ಸಿಬ್ಬಂದಿಗೆ ಕೊಟ್ಟು ಇದನ್ನು ಬಳಸಿಕೊಂಡು ಜನರಿಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ರಾಜರಾಜೇಶ್ವರಿನಗರ ಠಾಣೆಯ ಎಲ್ಲ ಪೊಲೀಸರು ಚರ್ಚೆ ನಡೆಸಿ ನೃತ್ಯ ಮಾಡಲು ನಿರ್ಧರಿಸಿದರು. ಮಹಿಳಾ ಪೇದೆ ಸೇರಿ 9 ಮಂದಿ ಸಿಬ್ಬಂದಿ ಏಪ್ರಿಲ್ 10ಕ್ಕೆ ‘ದೂರಾ ದೂರ..ಎಲ್ಲರನ್ನೂ ದೂರ ದೂರಾ ಮಾಡಿ ಕರೊನಾ..’ ಎಂಬ ಹಾಡಿಗೆ ನೃತ್ಯ ಮಾಡಿದ್ದಾರೆ. ಹಾಡಿನ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಲೀಸರು ಜನರಲ್ಲಿ ಎಷ್ಟೆಲ್ಲ ಶ್ರಮ ಪಡುತ್ತಿದ್ದಾರೆ. ಅವರ ಶ್ರಮಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು.. ಬಹುತೇಕ ಜನರು ಕರೊನಾ ಸೋಂಕು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನೃತ್ಯ ಮಾಡಿದ್ದೆವೆ. ಜತೆಗೆ ಪ್ರತಿದಿನ ಒತ್ತಡದಲ್ಲಿ ಕೆಲಸ ಮಾಡುವ ನಮಗೂ ಮನಸ್ಸಿಗೆ ವಿಶ್ರಾಂತಿ, ಖುಷಿ ತರಲೆಂದು ನೃತ್ಯ ಮಾಡಲಾಯಿತು. ಇದಕ್ಕೆ ಅಧಿಕಾರಿ ಮತ್ತು ಜನರಿಂದ ಪ್ರೋತ್ಸಾಹ ದೊರೆತಿದೆ ಎಂದು ರಾಜರಾಜೇಶ್ವರಿನಗರ ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.