ಕಟ್‌ಬೇಲ್ತೂರು ಮತ್ತು ವಂಡ್ಸೆ ಗ್ರಾಮದ ಗಡಿಯಲ್ಲಿ ಚಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಾಳಿಕೆರೆ ಕಿಂಡಿ ಅಣೆಕಟ್ಟು.  
ಜಿಲ್ಲೆ

ಬಾಳಿಕೆರೆ ಅಣೆಕಟ್ಟು ನಿಷ್ಪ್ರಯೋಜಕ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕುಂದಾಪುರ ತಾಲೂಕಿನ ಬಾಳಿಕೆರೆ ಎಂಬಲ್ಲಿ ಎರಡು ವರ್ಷಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕವಾಗಿದ್ದು, ಅಣೆಕಟ್ಟು ದುರಸ್ತಿಗೆ ಕೋಟ್ಯಂತರ ರೂ. ಅನುದಾನ ಬಳಸುತ್ತಿರುವುದು ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದೆ ವಂಡ್ಸೆ ಮತ್ತು ಕಟ್‌ಬೇಲ್ತೂರು ಗ್ರಾಪಂ ಗಡಿಭಾಗದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 7.5 ಕೋಟಿ ರೂ. ವೆಚ್ಚದಲ್ಲಿ ಚಕ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ 16 ಕಿಂಡಿಗಳ ಬೃಹತ್ ಕಿಂಡಿ ಅಣೆಕಟ್ಟು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಈ ಕಿಂಡಿ ಅಣೆಕಟ್ಟಿನಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ.

ಹಲಗೆ ಅಳವಡಿಸಿಲ್ಲ: ಅಣೆಕಟ್ಟು ನಿರ್ಮಿಸಿದ ದಿನದಿಂದ ಇಲ್ಲಿಯವರೆಗೆ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಲು ನಿರ್ಮಿಸಿದ ಚಾನೆಲ್‌ಗಳಲ್ಲಿ ಕಾಂಕ್ರೀಟ್ ತುಂಬಿಸಿರುವ ಪರಿಣಾಮ ಹಲಗೆ ಅಳವಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉಪ್ಪು ನೀರು ತಡೆಯಲು ಮರಳು ಚೀಲಗಳನ್ನು ಪೇರಿಸಿ ಇಡುವ ಕಾರ್ಯ ನಡೆಸುತ್ತಿದ್ದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಇದೀಗ 2 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

ತನಿಕೆಗೆ ಒತ್ತಾಯ

ಬಾಳಿಕೆರೆ ಕಿಂಡಿ ಅಣೆಕಟ್ಟು ಕಾಮಗಾರಿ ಬಗ್ಗೆ ಅಪಸ್ವರ ಎದ್ದಿದ್ದು, ಕಾಮಗಾರಿ ಬಗ್ಗೆ ಶಂಕೆ ಮೂಡಿದೆ. ಬಾಳಿಕೆರೆ ಕಿಂಡಿ ಅಣೆಕಟ್ಟು ಕಾಮಗಾರಿ ಸಮಗ್ರ ತನಿಖೆಗೆ ಸ್ಥಳೀಯರು ಒತ್ತಾಯಿಸಿದ್ದು, ಕಾಮಗಾರಿ ಲೋಪದೋಷ ಸಾರ್ವಜನಿಕರೆದುರು ಇಲಾಖೆಯನ್ನು ಬೆತ್ತಲು ಮಾಡಿದಂತಿದೆ.

ಉಪ್ಪು ನೀರಿನ ಸಮಸ್ಯೆ

ಅವೈಜ್ಞಾನಿಕ ಕಿಂಡಿ ಅಣೆಕಟ್ಟು ಕಾಮಗಾರಿಗೆ ಬೆಲೆ ತೆರುತ್ತಿರುವ ನದಿ ಪಾತ್ರದ ರೈತರಿಗೆ ಈವರೆಗೆ ಎದುರಿಸಿಕೊಂಡು ಬಂದಿರುವ ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕವಾಗಿದ್ದು, ದುರಸ್ತಿಗಾಗಿ ಮತ್ತೆ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವುದು ಇಲಾಖೆ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ.

ಡ್ಯಾಂ ನಿರ್ಮಿಸಿ ಎರಡೇ ವರ್ಷದಲ್ಲಿ ವೈಫಲ್ಯ ಕಾಣುವಂತಾದರೆ ಇದರ ಉದ್ದೇಶ ಅರ್ಥವಾಗುತ್ತಿಲ್ಲ. ಇದೀಗ ಕಿಂಡಿ ಅಣೆಕಟ್ಟು ದುರಸ್ತಿ ನೆಪದಲ್ಲಿ 2 ಕೋಟಿ ರೂ. ಹೆಚ್ಚುವರಿ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕವಾಗಿದೆ. ಬಾಳಿಕೆರೆ ಕಿಂಡಿ ಅಣೆಕಟ್ಟು ನಿರ್ಮಾಣದಲ್ಲಿನ ಲೋಪದೋಷಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ಹೊಣೆಗಾರರು. ಶರತ್ ಕುಮಾರ್ ಶೆಟ್ಟಿ ಕುಂದಾಪುರ ತಾಲೂಕು ಕೆಡಿಪಿ ಸದಸ್ಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಬಹುತೇಕ ಕಿಂಡಿ ಅಣೆಕಟ್ಟುಗಳಲ್ಲಿ ನೀರು ನಿಲ್ಲುತ್ತಿಲ್ಲ. ಉಪ್ಪು ನೀರು ಸೋರಿಕೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ಬಾಳಿಕೆರೆ ಕಿಂಡಿ ಅಣೆಕಟ್ಟು ಆರಂಭದಲ್ಲೇ ವೈಫಲ್ಯ ಕಂಡಿದ್ದು, ಹಲಗೆ ಹಾಕಲು ಸಾಧ್ಯವಾಗದೆ ಇದೀಗ ಹೆಚ್ಚುವರಿಯಾಗಿ 2 ಕೋಟಿ ರೂ. ಅನುದಾನದಲ್ಲಿ ಅಣೆಕಟ್ಟು ದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು 19 ಕಿಂಡಿ ಅಣೆಕಟ್ಟು ಕಾಮಗಾರಿ ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿದೆ. ಗುರುರಾಜ್ ಗಂಟಿಹೊಳೆ ಶಾಸಕ