* ಗೃಹ ಬಳಕೆ ಗ್ಯಾಸನ್ನು ವಾಣಿಜ್ಯ ಬಳಕೆಗೆ ಮಾರ್ಪಾಡು
* ಅಧಿಕಾರಿಗಳ ನಿರ್ಲಕ್ಷ್ಯ
* ಹಣ ಗಳಿಸುವ ಉದ್ದೇಶ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಆಟೋ ಸೇರಿ ಇನ್ನಿತರ ವಾಹನಗಳಿಗೆ ಅಡುಗೆ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ದಂಧೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.
ಹೌದು. ಸರ್ಕಾರ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುವುದಕ್ಕೆ ಅವಕಾಶ ನೀಡಿಲ್ಲ. ಆದರೂ, ತಾಲೂಕಿನಲ್ಲಿ ಕಾನೂನು ಬಾಹಿರವಾಗಿ ಗೃಹ ಬಳಕೆ ಗ್ಯಾಸನ್ನು ವಾಣಿಜ್ಯ ಬಳಕೆಗೆ ಮಾರ್ಪಾಡು ಮಾಡುವ ಗ್ಯಾಸ್ ರಿಪೀಲ್ಲಿಂಗ್ ದಂಧೆ ಸದ್ದಿಲ್ಲದೆ ಸಕ್ರಿಯವಾಗಿದೆ. ತಾಲೂಕಿನ ಗ್ರಾಮೀಣ ಭಾಗ ಸೇರಿ ನಗರದಲ್ಲಿ ದಂಧೆ ಅವ್ಯಾಹತವಾಗಿದೆ. ಹಣ ಗಳಿಸುವ ಉದ್ದೇಶದಿಂದ ಜೀವದ ಹಂಗು ತೊರೆದು ಕೆಲವರು ಇದರಲ್ಲಿ ತೊಡಗಿಕೊಂಡಿದ್ದಾರೆ. ಮನೆ, ಶೆಡ್‌ಗಳಲ್ಲಿ ಯಾರಿಗೂ ಗೊತ್ತಾಗದಂತೆ ದಂಧೆ ನಡೆಯುತ್ತಿದೆ.
ಆಟೋ ಮತ್ತು ಇನ್ನಿತರ ವಾಹನಗಳಿಗೆ ಬಳಸುವ ಗ್ಯಾಸ್‌ಗೆ ಕಡಿಮೆ ದಹನಶಕ್ತಿ ಇರುತ್ತದೆ. ಆದರೆ, ಅಡುಗೆ ಸಿಲಿಂಡರ್ ಹೆಚ್ಚಿನ ದಹನಶಕ್ತಿ ಹೊಂದಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ವಾಹನಗಳು ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದರೊಂದಿಗೆ, ಅಡುಗೆ ಸಿಲಿಂಡರ್‌ಗಳನ್ನು ವಾಹನಗಳಿಗೆ ರಿಫಿಲ್ಲಿಂಗ್ ಮಾಡುವಾಗ ಸ್ಫೋಟಗೊಂಡಿರುವ ಹಲವು ಪ್ರಕರಣಗಳು ಇವೆ. ಈ ಅಕ್ರಮ ಮನೆಗಳಲ್ಲಿಯೇ ನಡೆಯುತ್ತಿದ್ದು, ಅನಾಹುತ ಸಂಭವಿಸಿದರೆ ಘಟನೆಯ ಗಂಭೀರತೆ ಊಹಿಸಿಕೊಳ್ಳಲು ಸಾಧ್ಯವಿಲ್ಲ.
ತಾಲೂಕು ಸೇರಿ ನಗರದಲ್ಲಿ ಸಾವಿರಾರು ಆಟೋಗಳಿವೆ. ಇವುಗಳಲ್ಲಿ ಹೆಚ್ಚಿನ ಆಟೋಗಳು ಗ್ಯಾಸ್ ಬಳಕೆ ಮಾಡುತ್ತವೆ. ಬಹುತೇಕ ಆಟೋ ಚಾಲಕರು, ಗ್ಯಾಸ್ ಸ್ಟೇಷನ್‌ಗೆ ಹೋಗಿ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುತ್ತಾರೆ. ಆದರೆ, ಕೆಲವರು ಪುಡಿಗಾಸು ಉಳಿಸಿಕೊಳ್ಳಲು ಅಡುಗೆ ಸಿಲಿಂಡರ್‌ಗಳನ್ನು ಆಟೋಗಳಿಗೆ ಭರ್ತಿ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಇದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಿ ಎಂಬುದು ನಾಗರಿಕರ ಆಗ್ರಹವಾಗಿದೆ.
ಆಟೋ ಚಾಲಕರಿಗೆ ಗ್ಯಾಸ್ ಸ್ಟೇಷನ್‌ನಲ್ಲಿ ಭರ್ತಿ ಮಾಡಿಸಿಕೊಳ್ಳುವುದಕ್ಕಿಂತ ತುಸು ಕಡಿಮೆ ದರದಲ್ಲಿ ಅಡುಗೆ ಸಿಲಿಂಡರ್ ಗ್ಯಾಸ್ ಸಿಗುತ್ತದೆ. ಹೀಗಾಗಿ, ಹೆಚ್ಚಿನ ಆಟೋ ಚಾಲಕರು ಅಡುಗೆ ಸಿಲಿಂಡರ್ ಗ್ಯಾಸ್ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಹಕರಿಗೆ ಪೂರೈಕೆ ಮಾಡುವ ಸಿಲಿಂಡರ್‌ಗಳನ್ನು ಗ್ಯಾಸ್ ಪೂರೈಕೆದಾರರೇ ದಂಧೆ ಕೋರರಿಗೆ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ. ಈ ಬಗ್ಗೆ ಪೊಲೀಸ್ ಹಾಗೂ ಆಹಾರ ಇಲಾಖೆಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಕ್ರಮಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ನಗರದಲ್ಲಿ ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಅಧಿಕಾರಿಗಳು ದಂಧೆ ಯೊಂದರ ಮೇಲೆ ದಾಳಿ ನಡೆಸಿದಾಗ ಗ್ಯಾಸ್ ಸೇರಿ ಹಲವು ಪರಿಕರ ವಶಪಡಿಸಿಕೊಂಡ ಪ್ರಕರಣವೇ ಸಾಕ್ಷಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಕಾಟೇಜ್‌ನ ಬಿಲಾಲ್ ನಗರದಲ್ಲಿ ಅಕ್ರಮವಾಗಿ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳಿಂದ ವಾಣಿಜ್ಯ ಬಳಕೆಗೆ ರಿಫಿಲ್ಲಿಂಗ್ ಮಾಡುತ್ತಿದ್ದ ಮನೆಯ ಮೇಲೆ ದಾಳಿ ಮಾಡಿದ ತಾಲೂಕು ಆಹಾರ ನಿರೀಕ್ಷಕರು ಭರ್ತಿ ಹಾಗೂ ಖಾಲಿ ಸಿಲಿಂಡರ್‌ಗಳು, ರಿಫಿಲ್ಲಿಂಗ್ ಯಂತ್ರ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ರಮ್ಯಾ, ನಗರ ಠಾಣೆಯ ಪಿಎಸ್‌ಐ ಹರೀಶ್ ಮತ್ತು ತಾಲೂಕು ಆಹಾರ ನಿರೀಕ್ಷಕಿ ಪುಷ್ಪಲತಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ದೂರು ದಾಖಲಾಗಿದೆ.
ನಗರದ ಹಲವೆಡೆ ಅಕ್ರಮ ಗ್ಯಾಸ್ ರಿಪೀಲ್ಲಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಬಗ್ಗೆ ಸಂಬಂಧಿಸಿದವರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರಂತ. ಹಣದಾಸೆಗೆ ಕೆಲವರು ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು. ನಾಗವಾರ ಶಂಭೂಗೌಡ, ಹೋರಾಟಗಾರಗೃಹ ಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುವುದು ಶಿಕ್ಷಾರ್ಹ ಅಪರಾಧ. ಅಕ್ರಮ ಗ್ಯಾಸ್ ರಿಪೀಲ್ಲಿಂಗ್ ಸ್ಥಳಗಳ ಬಗ್ಗೆ ನಿಗಾವಹಿಸಿದ್ದೇವೆ. ಇತ್ತೀಚೆಗೆ ಒಂದು ಘಟಕದ ಮೇಲೆ ಪೊಲೀಸರ ಸಹಕಾರದಿಂದ ದಾಳಿ ನಡೆಸಿ ಕ್ರಮಜರುಗಿಸಿದ್ದೇವೆ. ಇಂತಹ ಘಟಕಗಳ ಬಗ್ಗೆ ಸಾರ್ವಜನಿಕರು ನಮ್ಮಗಮನಕ್ಕೆ ತಂದರೆ ಸಹಾಯವಾಗಲಿದೆ. ಪುಷ್ಪಲತಾ, ತಾಲೂಕು ಆಹಾರ ನಿರೀಕ್ಷಕಿ.