ಅಥಣಿ ಗ್ರಾಮೀಣ: ನಾಡಿನ ಸಂಸ್ಕೃತಿ ಸಂಪ್ರದಾಯಗಳನ್ನು ಒಳಗೊಂಡಿರುವ ಜಾನಪದ ಸಂಗೀತ ಕಲೆ ಹಾಗೂ ಜೀವನ ಕ್ರಮಗಳನ್ನು ಕಲಿಸುತ್ತದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಧಾಬಾಯಿ ಮಾದರ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ಘಟಕ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳುತ್ತದೆ. ವಿವಿಧ ಸಾಂಸ್ಕೃತಿಕ, ಸಂಪ್ರದಾಯ ಒಳಗೊಂಡಿರುವ ಜಾನಪದಕ್ಕೆ ಸಾವಿಲ್ಲ. ಈ ದಿಸೆಯಲ್ಲಿ ಯುವಕರು ಜಾನಪದ ಶೈಲಿಯ ಬದುಕು ಕಟ್ಟಿಕೊಳ್ಳಬೇಕು ಎಂದರು.
ರಾಜ್ಯಮಟ್ಟದ ಭಜನಾ ಕಲಾವಿದ ಗುರುಬಸಯ್ಯ ಕಾಡದೇವರಮಠ ಮಾತನಾಡಿ, ಆಧುನಿಕ ಯುಗದಲ್ಲಿ ಯಂತ್ರಗಳೆ ಎಲ್ಲ ಕೆಲಸಗಳನ್ನು ಮಾಡುತ್ತಿದ್ದು, ಜಾನಪದ ಕಲೆ ಬಡವಾಗುತ್ತಿದೆ. ಪ್ರತಿ ಮನೆಯಲ್ಲಿ ಸಂಸ್ಕೃತಿ, ಸಂಪ್ರದಾಯ ಅಳವಡಿಸಿಕೊಳ್ಳಬೇಕು ಎಂದರು. ಮನಸೆಳೆದ ಜಾನಪದ ಗಾಯನ: ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ರಾಧಾಬಾಯಿ ಮಾದರ ತಂಡದಿಂದವರಿಂದ ಜರುಗಿದ ಗೀಗೀ ಪದ, ಚೌಡಕಿ ಪದ ಹಾಗೂ ರಾಜ್ಯಮಟ್ಟದ ಭಜನಾ ಕಲಾವಿದ ಗುರುಬಸಯ್ಯ ಕಾಡದೇವರಮಠ ಅವರ ತಂಡದಿಂದ ಜರುಗಿದ ಭಜನಾ ಪದಗಳ ಸಂಗೀತ ಸಾವಿರಾರು ಜನರ ಮನಸೂರೆಗೊಳಿಸಿತು.
ಪ್ರಾಚಾರ್ಯ ಪ್ರೊ. ಪರಪ್ಪ ಮಗದುಮ್ಮ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಬಾಯಿ ಮಾದರ, ಸಾಬು ಭಜಂತ್ರಿ, ಪ್ರೊ. ದಯಾನಂದ ಎನ್.ಎಲ್., ರಾಮಕೃಷ್ಣ ಭಜಂತ್ರಿ, ಡಾ. ವಿದ್ಯಾಶ್ರೀ ಕೋಲಕಾರ, ಶ್ರೀಕಾಂತ ಜಾಧವ, ಎಚ್.ಎನ್.ಮಂಜುನಾಥಸ್ವಾಮಿ, ರಮೇಶ ಸಕ್ರಿ, ಜಯರಾಮ, ಸಂದ್ರಾಗಡದೆ, ಮೀನಾಕ್ಷಿ ಕುಲಕರ್ಣಿ, ವೈಶಾಲಿ ಅಪರಾಜ, ಕಾಕಾಸಾಹೇಬ ಶೇಡಶ್ಯಾಳೆ, ಶೈಲಶ್ರೀ ತುಬಚಿ ಇತರರು ಇದ್ದರು. ಪಲ್ಲವಿ ಎಂ.ಎಂ. ಸ್ವಾಗತಿಸಿದರು. ಭೀಮು ಮಚಗಾರ ನಿರೂಪಿಸಿದರು.