ವಿಜಯಪುರ: ಬಂಜಾರಾ ಸಮಾಜ ಬಸವಾದಿ ಶರಣರ ಕಾಯಕ ತತ್ವ ಪಾಲಿಸುವುದರ ಜೊತೆಗೆ ಅದರದೇ ಆದ ಸಂಸ್ಕೃತಿಯನ್ನೂ ಮುಂದುವರೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಜಾಲಗೇರಿ ಎಲ್ಟಿ-1 ರಲ್ಲಿ ಬುಧವಾರ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಂಜಾರಾ ಸಮಾಜ ಅದರದೇ ಆದ ವಿಭಿನ್ನ ಸಂಸ್ಕೃತಿ ಹೊಂದಿದ್ದು, ದುಡಿಮೆಯ ಕುರಿತು ಬಸವಾದಿ ಶರಣರು ಮತ್ತು ಅಣ್ಣ ಬಸವಣ್ಣನವರು ಹೇಳಿದಂತೆ ಕಾಯಕ ತತ್ವಕ್ಕೆ ಮಹತ್ವ ಕೊಡುತ್ತದೆ. ಶ್ರಮ ಜೀವಿಗಳಾಗಿರುವ ಈ ಸಮಾಜದ ಜನರು ಶ್ರಮವಹಿಸಿ ದುಡಿದು ತಮ್ಮ ತಮ್ಮ ತಾಂಡಾಗಳಲ್ಲಿ ಅಷ್ಟೇ ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕಾಯಕಕ್ಕೆ ನೀಡುವಷ್ಟೇ ಮಹತ್ವವನ್ನು ಸಂಸ್ಕೃತಿಗೂ ನೀಡುತ್ತಿದೆ. ಬಹಳಷ್ಟು ಸಮುದಾಯಗಳು ತಮ್ಮ ಸಂಸ್ಕೃತಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಬಂಜಾರಾ ಸಮುದಾಯದ ತಾಯಂದಿರು, ಸಹೋದರಿಯರು ಇವತ್ತಿಗೂ ತಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ಶ್ಲಾಘನೀಯ ಎಂದರು.
2013-18ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ನಾನು ಪ್ರತಿ ತಾಂಡಾಗಳಿಗೆ ಕನಿಷ್ಠ ರೂ. 50 ಲಕ್ಷದಿಂದ ರೂ. 1 ಕೋಟಿವರೆಗೆ ದೇವಸ್ಥಾನ, ಸಮುದಾಯ ಭವನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಅಲ್ಲದೇ, ವಿಜಯಪುರ ನಗರದಲ್ಲಿ ಸೇವಾಲಾಲ, ರಾಮರಾವ ಮಹಾರಾಜರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಅಲ್ಲದೇ, ಹಾಮುಲಾಲ ದೇವಸ್ಥಾಕ್ಕೆ ನಿವೇಶನ ಒದಗಿಸಿ ದೇವಸ್ಥಾನ ನಿರ್ಮಾಣಕ್ಕೆ ಹಾಗೂ ಅಥಣಿ ತಾಲೂಕಿನಲ್ಲಿರುವ ಮೂಲ ಗದ್ದುಗೆಯ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ನಮ್ಮ ಪ್ರಯತ್ನದ ಫಲವಾಗಿ ಈ ಬಾರಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಕಾಶ ಮಹಾರಾಜರು, ಅರ್ಜುನ ರಾಠೋಡ, ರಾಜಶೇಖರ ಪವಾರ, ವಾಮನ ಚವಾಣ್, ಧನಸಿಂಗ್ ಚವಾಣ್, ತಾವರು ರಾಠೋಡ, ರಾಮು ಕಾರಬಾರಿ, ಅಮಸಿದ್ಧ ನಾಯಕ, ಸೋಮು ಢಾವ ಮತ್ತಿತರರಿದ್ದರು.