ಜಿಲ್ಲೆ

ನೆಲಮಂಗಲ ಸೇರಿದ ಮಾಗಡಿ ಮುಕುಟ

* ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿ ಬೇರ್ಪಡಿಸಿ ಸರ್ಕಾರ ಆದೇಶ

* ನೆಲಮಂಗಲ ಶಾಸಕರ ಕೈ ಮೇಲು ?

* ನಮಗೇನೂ ಸಮಸ್ಯೆ ಇಲ್ಲ ಎಂದ ಬಾಲಕೃಷ್ಣ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

ತಾಲೂಕಿಗೆ ಕಳಶ ಪ್ರಾಯವಾಗಿದ್ದ ಸೋಲೂರು ಹೋಬಳಿಯನ್ನು ವಿರೋಧದ ನಡುವೆಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಸೇರಿಸಲು ರಾಜ್ಯ ಸಂಪುಟ ಸಭೆಯಲ್ಲಿ ತಿರ್ಮಾನಿಸಿ ಅಧಿಸೂಚನೆ ಹೊರಡಿಸಿದ್ದು, 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಸೋಲೂರು ಮಾಗಡಿಯ ಭಾಗವಾಗಿದ್ದು, 1978ರ ಬಳಿಕ ಕುದೂರು ವಿಧಾನಸಭಾ ಕ್ಷೇತ್ರವಿದ್ದಾಗ ಸೋಲೂರಿನವರು ಕುದೂರು ವಿಧಾನಸಭಾ ಕ್ಷೇತ್ರಕ್ಕೆ, ಬಳಿಕ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮತ ಹಾಕುತ್ತಿದ್ದರು. ಆದರೆ ಕಂದಾಯ, ಆಡಳಿತ ಮಾತ್ರ ಮಾಗಡಿಯಲ್ಲೇ ಇತ್ತು. ಆದರೀಗ ರಾಜ್ಯ ಸರ್ಕಾರ ನೆಲಮಂಗಲಕ್ಕೆ ಸೋಲೂರು ಹೋಬಳಿಯನ್ನು ಸೇರಿಸಿ, ತರಾತುರಿ ನಿರ್ಧಾರ ಕೈಗೊಂಡಿದ್ದು, ಮಾಗಡಿ ತಾಲೂಕಿನ ಭೂಭಾಗದ ವಿಸ್ತೀರ್ಣ ಕಡಿಮೆಯಾಗಲಿದೆ.

ಹಠಕ್ಕೆ ಬಿದ್ದರೆ ಶಾಸಕ ಶ್ರೀನಿವಾಸ್

2020ರಲ್ಲಿ ಅಂದಿನ ಜಿಲ್ಲಾಧಿಕಾರಿ ಸೋಲೂರನ್ನು ಕಾನೂನಾತ್ಮಕವಾಗಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸೇರಿಸಲು ಸಾಕಷ್ಟು ತೊಡಕುಗಳಿವೆ ಎಂದು ವರದಿ ನೀಡಿದ್ದರು. ಆದರೂ ನೆಲಮಂಗಲ ಶಾಸಕ ಶ್ರೀನಿವಾಸ್ ಹಠಕ್ಕೆ ಬಿದ್ದು ಸೋಲೂರನ್ನು ಮಾಗಡಿಯಿಂದ ಬೇರ್ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಒತ್ತಡ ಹೇರಿ, ಸಚಿವ ಸಂಪುಟದಲ್ಲಿ ಆತುರದ ತಿರ್ಮಾನ ಕೈಗೊಳ್ಳುವಂತೆ ಮಾಡಿದ್ದಾರೆ ಎಂದು ತಾಲೂಕಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆಯೇ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ವಕೀಲ ಸಂಘ ಹಾಗೂ ಇತರ ತಾಲೂಕಿನ ಸಂಘಟನೆಗಳು ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವ ವಿಚಾರವಾಗಿ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ತೆಗೆ ಲೋಕಸಭಾ ಸದಸ್ಯ ಡಾ.ಸಿಎನ್.ಮಂಜುನಾಥ್ ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ತಾಲೂಕಿಗೆ ನಷ್ಟ

ಸೋಲೂರು ಹೋಬಳಿ ತಾಲೂಕಿನಿಂದ ಬೇರ್ಪಟ್ಟ ಕಾರಣ ಮಾಗಡಿ ಜಿಪಂ, ತಾಪಂನ 3 ಕ್ಷೇತ್ರಗಳು ಕೈತಪ್ಪಲಿವೆ. ಭೌಗೋಳಿಕ ವಿಸ್ತೀರ್ಣವೂ ಕಡಿಮೆಯಾಗಲಿದೆ. ಶಿಕ್ಷಣ ಇಲಾಖೆ, ಆಸ್ಪತ್ರೆ, ಕೃಷಿ, ತೋಟಗಾರಿಕೆ, ಕಂಚುಗಲ್ಲು ಬಂಡೇಮಠ, ಗದ್ದುಗೆ ಮಠ, ಚಿಲುಮೆ ಮಠ, ಜಗಣ್ಣಯ್ಯನ ಮಠ, ಆರ್ಯ ಈಡಿಗ ಮಠ, ತಟ್ಟೆಕೆರೆ ಶ್ರೀರಂಗನಾಥಸ್ವಾಮಿ ದೇಗುಲ, ಸೋಲೂರು ಗ್ರಾಪಂ ಬಿಟ್ಟಸಂದ್ರ, ಬಾಣವಾಡಿ, ಮೋಟಗೊಂಡನಹಳ್ಳಿ, ಗುಡೇಮಾರನಹಳ್ಳಿ, ಲಕ್ಕೇನಹಳ್ಳಿಗಳು ನೆಲಮಂಗಲ ತಾಲೂಕಿಗೆ ಸೇರಲಿವೆ. ಕಂದಾಯ ಇಲಾಖೆ, ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಾಲೂಕಿನ ತಲಾ ಆದಾಯ ಹಾಗೂ ಶುಲ್ಕ ವಸೂಲಿಯೂ ಕುಸಿತವಾಗಲಿದೆ. ಜತೆಗೆ ತಾಲೂಕಿನ ಸರ್ಕಾರಿ ಕಚೇರಿಗಳು 3 ಹೋಬಳಿ ಮತ್ತು ಮಾಗಡಿ ಪಟ್ಟಣವನ್ನೊಳಗೊಂಡಂತೆ ಆಡಳಿತ ನಡೆಸುವ ಸ್ಥಿತಿ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವಕೀಲರ ಸಂಘ ಹಾಗೂ ಸೋಲೂರು ಹೋಬಳಿ ಮುಖಂಡರು ಸರ್ಕಾರದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ, ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಬೆಂಗಳೂರು ದಕ್ಷಿಣ ನಾಮಕರಣದಿಂದ ಸೋಲೂರಿಗೂ ಬರುತ್ತಿತ್ತು ಬೆಲೆ

ಈ ಮೊದಲು ಸೋಲೂರಿನ ಕೆಲ ರಾಜಕೀಯ ಹಿತಾಸಕ್ತರು ಸೋಲೂರನ್ನು ಬೆಂಗಳೂರು ಗ್ರಾಮಾಂತರಕ್ಕೆ ಸೇರಿಸಿದರೆ ಬೆಂಗಳೂರು ಎಂಬ ಹೆಸರಿನಿಂದ ಭೂಮಿ ಬೆಲೆ ಹೆಚ್ಚಾಗಲಿದೆ ಎಂಬ ಉದ್ದೇಶದಿಂದ ಹುನ್ನಾರ ನಡೆಸಿದ್ದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ್ದರಿಂದ ಸೋಲೂರು ಹೋಬಳಿ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೇ ಇದ್ದಂತಾಗಿತ್ತು. ತೆಗೆ ಬೆಂಗಳೂರು ಹೆಸರಿರುವುದರಿಂದ ಸೋಲೂರು ಹೋಬಳಿಯನ್ನು ಮಾಗಡಿಯಿಂದ ಬೇರ್ಪಡಿಸುವ ಅವಶ್ಯಕತೆಯೂ ಇರಲಿಲ್ಲ ಎಂಬುದು ಹೋಬಳಿಯ ಹಲವರ ವಾದ. ಇನ್ನು ರಾಜ್ಯದಲ್ಲಿ ಕ್ಷೇತ್ರ ಮರು ವಿಂಗಡಣೆಗೆ ಸಿಲುಕಿರುವ ಸೋಲೂರು ಹೋಬಳಿಯಂತಹ 100ಕ್ಕೂ ಹೆಚ್ಚು ಹೋಬಳಿಗಳಿವೆ. ಇವುಗಳನ್ನು ಬಿಟ್ಟು ಸೋಲೂರು ಹೋಬಳಿಯನ್ನು ಮಾತ್ರ ಮಾಗಡಿಯಿಂದ ಬೇರ್ಪಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಕಾಲ ಮಿಂಚಿಲ್ಲ

ಈ ವಿಚಾರವಾಗಿ 8 ತಿಂಗಳಿಂದ ಶಾಸಕರಾದ ಎಚ್.ಸಿ.ಬಾಲಕೃಷ್ಣ ಹಾಗೂ ಶ್ರೀನಿವಾಸ್ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಆದರೀಗ ಶಾಸಕ ಶ್ರೀನಿವಾಸ್ ಕೈ ಮೇಲಾದಂತೆ ಕಾಣುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಶಾಸಕ ಎಚ್.ಸಿ.ಬಾಲಕೃಷ್ಣ ನೇತೃತ್ವವಹಿಸಿ ಸರ್ಕಾರಕ್ಕೆ ಮನವಿ ಮಾಡಿದರೆ ಸೋಲೂರನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಬಹುದು. ವಿಎಸ್ಸೆಸ್ಸೆನ್, ಹಾಲಿನ ಡೇರಿಗಳಲ್ಲಿ ಆಯ್ಕೆಯಾಗಿರುವ ಸ್ಥಾನಗಳು ಶಾಸಕ ಬಾಲಕೃಷ್ಣ ಪರವಾಗಿ ಇದ್ದರೂ ಸೋಲೂರನ್ನು ಉಳಿಸಿಕೊಳ್ಳಲು ಬಾಲಕೃಷ್ಣ ವಿಫಲರಾದರೆ? ಎಂಬ ಪ್ರಶ್ನೆ ಮೂಡಿದೆ. ಹಾಗೆಯೇ ಸಚಿವರೊಂದಿಗೆ ಹೆಚ್ಚಿನ ಒಡನಾಟವಿರುವ ಬಾಲಕೃಷ್ಣ ಅವರಿಗೆ ಇಂತಹ ವಿದ್ಯಮಾನ ತಿಳಿದಿರಲಿಲ್ಲವೇ ? ಎಂಬ ಪ್ರಶ್ನೆಗಳೂ ತಾಲೂಕಿನಲ್ಲಿ ಉದ್ಭವಿಸಿವೆ.

ಮೌನಕ್ಕೆ ಜಾರಿದ ಬಾಲಕೃಷ್ಣ

ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವುದು ಬೇಡ ಎಂದು ಅಂದು ಪ್ರತಿಭಟನೆಗೆ ಮುಂದಾಗಿದ್ದ ಶಾಸಕ ಬಾಲಕೃಷ್ಣ, ಇಂದೇಕೇ ಮೌನ ವಹಿಸಿದ್ದಾರೆ? ಎಂಬುದು ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಹೋಬಳಿ ಜನರು ರಾಮನಗರದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಲಭವಾಗಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ಹೋಬಳಿ ನೆಲಮಂಗಲಕ್ಕೆ ಸೇರ್ಪಡೆಯಾದ ಕಾರಣ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿ ಸೇವೆಗೆ ದೂರದ ದೇವನಹಳ್ಳಿಗೆ ತೆರಳುವ ಅನಿವಾರ್ಯತೆ ಬಂದೊದಗಲಿದೆ.

ಕಾಡಲಿದೆ ಭೂಸ್ವಾಧೀನ ಭೂತ

ಹೋಬಳಿಯಲ್ಲಿ 68 ಕಂದಾಯ ಗ್ರಾಮ, 86 ದಾಖಲೆ ಗ್ರಾಮಗಳಿದ್ದು, ಹೋಬಳಿಯ ಭೌಗೋಳಿಕ ವಿಸ್ತೀರ್ಣ 38562-03 ಎಕರೆ, 21,395 ಗಂಡು, 20,898 ಹೆಣ್ಣು ಸೇರಿ ಒಟ್ಟು 42,293 ಮಂದಿ ಇದ್ದಾರೆ. ಈ ಪೈಕಿ 21,395 ಪುರುಷ, 16,043 ಮಹಿಳೆಯರು ಸೇರಿ ಒಟ್ಟು 32,089 ಮತದಾರರಿದ್ದಾರೆ. ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶೇ.60 ಗ್ರಾಮಗಳು ಕೆಐಎಡಿಬಿಗೆ ಭೂಸ್ವಾಧೀನವಾಗಿದ್ದು, ರೈತರು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಹೊಂದಿಕೊಂಡಿರುವ ಸೋಲೂರು ಹೋಬಳಿ ಕೂಡ ಭೂಸ್ವಾಧೀನವಾಗುವ ಆತಂಕ ರೈತರಲ್ಲಿ ಹೆಚ್ಚಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀಡಿರುವ ಮಹತ್ವಾಕಾಂಕ್ಷೆ ಯೋಜನೆಗಳು ಸೋಲೂರು ಹೋಬಳಿಯಿಂದ ದೂರ ಸರಿಯಲಿವೆ. ಹಾಗೆಯೇ ಸೋಲೂರು ಹೋಬಳಿಯು ನೆಲಮಂಗ ಗ್ರಾಮೀಣ ಪ್ರದೇಶಕ್ಕೆ ಸೇರಿದ ಕಾರಣ ಅಭಿವೃದ್ಧಿಯಲ್ಲಿ ಹಲವು ವರ್ಷಗಳ ಹಿಂದಕ್ಕೆ ಸರಿಯುವ ಆತಂಕ ಹೋಬಳಿ ಜನರನ್ನು ಕಾಡುತ್ತಿದೆ.

ಸೋಲೂರು ಹೋಬಳಿಯನ್ನು ಮಾಗಡಿಯಿಂದ ಬೇರ್ಪಡಿಸಿರುವುದು ಕೆಂಪೇಗೌಡರ ನಾಡನ್ನು ಬೇರೆ ತಾಲೂಕಿಗೆ ಹಂಚಿದಂತಾಗಿದೆ. ವಿಧಾನಸಭೆ ಕ್ಷೇತ್ರ ನೆಲಮಂಗಲವಾದರೂ ಕಂದಾಯ, ಕಾನೂನಾತ್ಮಕವಾಗಿ ಮಾಗಡಿ ತಾಲೂಕಿನಲ್ಲಿತ್ತು. ನಮ್ಮ ಮತದಾನದ ಹಕ್ಕು ನೆಲಮಂಗಲಕ್ಕಿದ್ದರೂ ಸರ್ಕಾರಿ ಸೇವೆಗೆ ಮಾಗಡಿಗೆ ಹೋಗುತ್ತಿದ್ದೆವು. ಕಾನೂನಾತ್ಮ, ಆಡಳಿತಾತ್ಮಕ ಹಾಗೂ ರಚನಾತ್ಮಕವಾಗಿ ಸೋಲೂರನ್ನು ಮಾಗಡಿಗೆ ಸೇರಿಸಿದರೆ, ಜನ ಪ್ರತಿನಿಧಿಗಳು ಮಾಗಡಿಯವರೇ ಆದರೆ ನಮಗೆ, ಜನರಿಗೆ ಅನುಕೂಲವಾಗಲಿದೆ.ಶ್ರೀ ಚನ್ನಬಸವ ಸ್ವಾಮೀಜಿಗುಡೇಮಾರನಹಳ್ಳಿ ಜಗಣ್ಣಯ್ಯನ ಮಠ.

---

ವಕೀಲರ ಸಂಘದ ಅಧ್ಯಕ್ಷ

ಸುರೇಶ್

ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲೇ ಉಳಿಯಬೇಕು. ಈ ವಿಚಾರವಾಗಿ ಸಂಘದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸುವ ಜತೆಗೆ ಕಾನೂನು ಹೋರಾಟ ನಡೆಸುವೆವು.

===

ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರ್ಪಡೆ ಬೇಡ ಎಂದರೂ ಅಲ್ಲಿನ ಶಾಸಕ ಶ್ರೀನಿವಾಸ್ ಬೇಕೆಂದು ಸೇರಿಸಿಕೊಂಡಿದ್ದಾರೆ. ನಮಗೇನೂ ತೊಂದರೆ ಇಲ್ಲ.

ಎಚ್.ಸಿ.ಬಾಲಕೃಷ್ಣ

ಶಾಸಕ ಮಾಗಡಿ

======

ಮಾಗಡಿ ತಾಲೂಕು ರೈತಸಂಘದ ಅಧ್ಯಕ್ಷ

ಲೋಕೇಶ್

ಸೋಲೂರನ್ನು ಯಾವ ಕಾರಣಕ್ಕೂ ನೆಲಮಂಗಲಕ್ಕೆ ಸೇರಿಸಬಾರದು. ಸೋಲೂರು ಮಾಗಡಿಯ ಕಿರೀಟ ಇದ್ದಂತೆ. ಚುನಾಯಿತ ಪ್ರತಿನಿಧಿಗಳು ಪ್ರತಿಷ್ಠೆಗಾಗಿ ಹೋಬಳಿಯನ್ನು ಬಲಿಕೊಡಬಾರದು. ಎಲ್ಲ ಸಂಘಟನೆಗಳಿಂದ ಬೃಹತ್ ಹೋರಾಟ ನಡೆಸಲಾಗುವುದು.

===

ಟಿಎಪಿಸಿಎಂಎಸ್ ಅಧ್ಯಕ್ಷ

ಶಿವಪ್ರಸಾದ್.ಎಚ್.ಆರ್

ಸೋಲೂರು ನೆಲಮಂಗಲಕ್ಕೆ ಸೇರಬಾರದು. ಚುನಾಯಿತ ಪ್ರತಿನಿಧಿಗಳು ಸೋಲೂರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊರಬೇಕು. ಅವರ ಹಿಂದೆ ನಾವಿರುತ್ತೇವೆ.