ಸಿದ್ದಾಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಮಡಿಕೇರಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಕೆ.ಕೆ.ರಹೀಮ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಘಟನೆ ಹಿನ್ನೆಲೆ : 2022ರ ಆ.3ರಂದು ಅಪರಾಧಿ ಶಾಲೆ ಮುಗಿದ ನಂತರ ಅಪ್ರಾಪ್ತ ಬಾಲಕಿಯನ್ನು ತನ್ನ ಜೀಪ್‌ನಲ್ಲಿ ಮನೆಗೆ ಬಿಡುವ ಸಂದರ್ಭ ಚಾಕಲೇಟ್ ಕೊಡಿಸುವುದಾಗಿ ಆಸೆ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ತಂದೆ ನೀಡಿದ ದೂರಿನ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಠಾಣೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಪಿ.ಮೋಹನ್‌ರಾಜು ತನಿಖೆ ನಡೆಸಿ, ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಕೆ.ಬಸವರಾಜ್ ಅಪರಾಧಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದಾರೆ. ವಿಶೇಷ ಅಭಿಯೋಜಕ ಬಿ.ಎಸ್.ರುದ್ರ ಪ್ರಸನ್ನ ವಾದ ಮಂಡಿಸಿದ್ದರು.