ವಿಜಯಪುರ: ಸಮಾಜದಲ್ಲಿ ನಾವೆಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರೂ ಎತ್ತಿ ಹಿಡಿಯಬೇಕು ಎಂದು ಜಿ.ಪಂ. ಸಿಇಒ ರಿಷಿ ಆನಂದ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ವಿಚಾರ ಸಂಕಿರಣ-2024 ಕಾರ್ಯಕ್ರಮ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಪ್ರಮುಖ ಘಟ್ಟಗಳ ಕುರಿತ ಛಾಯಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ ಎಂದರು.
ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವು ಬಡವರ, ಮಹಿಳೆಯರ ಶೋಷಿತರ ಧ್ವನಿಯಾಗಿದೆ. ಅಲ್ಲದೆ, ದೇಶದ ನಾಗರಿಕರಿಗೆ ಶಕ್ತಿಯಾಗಿದೆ. ನಮ್ಮ ಸಂವಿಧಾನ ಸಾಕಷ್ಟು ಅಧ್ಯಾಯ, ಪರಿಚ್ಛೇಧಗಳನ್ನೊಳಗೊಂಡಿದೆ. ಪ್ರತಿಯೊಬ್ಬರು ಜೀವನ ಶೈಲಿ ಹೇಗಿರಬೇಕೆಂಬ ಕುರಿತು ಅದರಲ್ಲಿ ಅಳವಡಿಸಲಾಗಿದೆ. ರಾಜ್ಯ, ನೀತಿ, ನಿರ್ದೇಶಕ ತತ್ವಗಳನ್ನು ಒಳಗೊಂಡ ಸುಂದರ ಸಂವಿಧಾನವಾಗಿದೆ. ಕಲ್ಯಾಣ ರಾಜ್ಯ ನಿರ್ಮಾಣ, ಜನ ಕಲ್ಯಾಣಕ್ಕಾಗಿ ಸಂವಿಧಾನದ ಆಶಯಗಳು ತಿಳಿಸುತ್ತವೆ. ಅಂತಹ ಶ್ರೇಷ್ಠ ಸಂವಿಧಾನದ ಆಶಯಕ್ಕನುಗುಣವಾಗಿ ಎಲ್ಲರೂ ನಡೆಯಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬೇರೆ ದೇಶಗಳಿಂದ ನಮ್ಮ ದೇಶದ ಸಂವಿಧಾನ ಅತ್ಯಂತ ಗಟ್ಟಿಯಾಗಿದೆ. ಸಂವಿಧಾನದ ಆಶಯ ಮತ್ತು ಯಶಸ್ಸು ಸಂಭ್ರಮಿಸುವ ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ, ಈ ಕಾರ್ಯ ನಿರಂತರವಾಗಿ ನಡೆಯಬೇಕು. ಪೋಷಕರು ಮಕ್ಕಳಿಗೆ ಆಸ್ತಿ ಮಾಡದೇ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಎಚ್.ಟಿ. ಪೋತೆ ಉಪನ್ಯಾಸ ನೀಡಿ, ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ತನ್ನ ವಿಧ್ವತ್ತಿನಿಂದ ವಿಶ್ವ ಪ್ರಸಿದ್ಧರಾದರು. ಜತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಒತ್ತು ನೀಡಲಾಗಿದೆ. ಅಂಬೇಡ್ಕರ್ ಅವರು ಎರಡು ವರ್ಷ ಹನ್ನೊಂದು ತಿಂಗಳ ಹದಿನೆಂಟು ದಿನಗಳಲ್ಲಿ ಸಂವಿಧಾನ ರಚನೆ ಮಾಡುವ ಮೂಲಕ ಶೋಷಿತ, ಮಹಿಳೆ, ದೀನ ದಲಿತರಿಗಾಗಿ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿದರು. ಸಂವಿಧಾನ ದಿನಾಚರಣೆ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗಾರ್, ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಮಲ್ಲಿಕಾರ್ಜುನ ಬಟಗಿ, ಮಹೇಶ ಕ್ಯಾತನವರ, ಪಾವರ್ತಿ ಕುರ್ಲೆ, ಜಗದೇವ ಸೂರ್ಯವಂಶಿ ಮತ್ತಿತರರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಕುರಿತು ವಿಚಾರ ಸಂಕಿರಣ ನಡೆಯಿತು. ಕೂಡಗಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯ ಉಪನ್ಯಾಸಕ ಬಸವರಾಜ ಜಾಲವಾದ ಭಾರತ ಸಂವಿಧಾನದ ಹೆಜ್ಜೆಗಳು ಕುರಿತು ಮತ್ತು ಲಚ್ಯಾಣದ ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಭೀಮರಾವ ಗೊಣಸಗಿ ಭಾರತದ ಸಂವಿಧಾನದ ಪ್ರಸ್ತಾವನೆ ಆಶಯಗಳ ಕುರಿತು ವಿಷಯ ಮಂಡಿಸಿದರು. ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧ್ಯಕ್ಷತೆ ವಹಿಸಿದ್ದರು.
ನಂತರ ನಡೆದ ಗೋಷ್ಠಿಯಲ್ಲಿ ವಿಜಯಪುರದ ನ್ಯಾಯವಾದಿಗಳ ಸಂಘದ ಗೌರವ ಕಾರ್ಯದರ್ಶಿ ಸುರೇಶ್ ಚೂರಿ ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆ ವಿಷಯದ ಕುರಿತು ಮತ್ತು ತಾಳಿಕೋಟೆಯ ಎಸ್‌ಕೆ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಸುಜಾತ ಚಲವಾದಿ ಸಂವಿಧಾನ ಅಂದು ಮತ್ತು ಮುಂದು ವಿಷಯದ ಕುರಿತು ಉಪನ್ಯಾಸ ನೀಡಿದರು. ಸಹಕಾರಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಬಿ.ಆರ್ ಬನಸೋಡೆ ಅಧ್ಯಕ್ಷತೆ ವಹಿಸಿದ್ದರು.
ಛಾಯಾಚಿತ್ರಗಳ ಪ್ರದರ್ಶನ : ಕಂದಗಲ್ಲ ರಂಗಮಂದಿರ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದದ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಅಲ್ಲದೇ, ವಿದ್ಯಾರ್ಥಿಗಳು, ಶಿಕ್ಷಕರು ಬಿಡಿಸಿದ ಚಿತ್ರಕಲೆಯನ್ನು ಸಹ ಪ್ರದರ್ಶಿಸಲಾಯಿತು. ಮಾಹಿತಿ ಆಗರವಾದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಸಾರ್ವಜನಿಕರು, ಅಂಬೇಡ್ಕರ್ ಅವರು ಕುರಿತ ಮಾಹಿತಿಯನ್ನು ಪಡೆದರು.
ಮೆರವಣಿಗೆ : ಕಾರ್ಯಕ್ರಮಕ್ಕೂ ಮುನ್ನ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹಿನ್ನೆಲೆ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ಜಾಗೃತಿ ಜಾಥಾಕ್ಕೆ ಜಿ.ಪಂ. ಸಿಇಒ ರಿಷಿ ಆನಂದ ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ವಿವಿಧ ಪ್ರಮುಖ ವೃತ್ತಗಳ ಮೂಲಕ ಸಾಗಿದ ಜಾಥಾ ನಂತರ ಕಂದಗಲ್ಲ ರಂಗಮಂದಿರದಲ್ಲಿ ಸಮಾವೇಶಗೊಂಡಿತು.