ಜಿಲ್ಲೆ

ರಾಜಕಾರಣಿಗಳ ಅಧಿಕಾರ ದಾಹದಿಂದ ದೇಶ ವಿಭಜನೆ

ಹುಬ್ಬಳ್ಳಿ : ದೇಶದ ಜನರಿಗೆ ವಿಭಜನೆ ಬೇಕಿರಲಿಲ್ಲ. ಆದರೆ, ಅಧಿಕಾರದ ದುರಾಸೆ ಹೊಂದಿದ್ದ ರಾಜಕಾರಣಿಗಳಿಂದಾಗಿ ದೇಶ ಒಡೆಯಿತು ಎಂದು ಹಿರಿಯ ನ್ಯಾಯವಾದಿ ಅರುಣ ಜೋಶಿ ಹೇಳಿದರು.

ಭಾರತ ವಿಭಜನೆಯ ಕರಾಳ ದಿನದ ಸ್ಮರಣಾರ್ಥ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಭಜನೆ ವಿಭೀಷಣ ಸ್ಮೃತಿ ದಿವಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಖಂಡ ಭಾರತವನ್ನು ತುಂಡರಿಸಿದ್ದು ಯಾರು ಎಂಬುದರ ಇತಿಹಾಸ ಭಾರತೀಯರು ಅರಿತುಕೊಳ್ಳಬೇಕು. ಬ್ರಿಟಿಷರ ಗುಣಗಾನ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದ ಕಾಂಗ್ರೆಸ್ಸಿಗರು, ನಂತರದ ದಿನಗಳಲ್ಲಿ ಮುಸ್ಲಿಂರ ಓಲೈಕೆಗೆ ಆಸಕ್ತಿ ತೋರತೊಡಗಿದರು. ಇಂದಿಗೂ ಕಾಂಗ್ರೆಸ್​ನಲ್ಲಿ ಮುಸ್ಲಿಂರ ಓಲೈಕೆ ಮುಂದುವರಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಂದು ಹನಿ ರಕ್ತ ಕೊಡದೇ ಸ್ವಾತಂತ್ರ್ಯ ಪಡೆದೇವೆಂಬ ಹೇಳಿಕೆಗಳು ಸಂಪೂರ್ಣ ಸುಳ್ಳು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ನಗುತ್ತಲೇ ನೇಣುಗಂಬ ಏರಿದ್ದನ್ನು ದೇಶವಾಸಿಗಳು ಮರೆಯಲು ಸಾಧ್ಯವಿಲ್ಲ ಎಂದರು.

ಹಿಂದು-ಮುಸ್ಲಿಂರು ಒಗ್ಗಟ್ಟಾಗಿದ್ದರೆ ದೇಶವನ್ನು ಸುಲಭವಾಗಿ ಆಳಲು ಸಾಧ್ಯವಿಲ್ಲವೆಂಬುದನ್ನು ಅರಿತಿದ್ದ ಬ್ರಿಟಿಷರು, ಎರಡೂ ಧರ್ಮದವರಲ್ಲಿ ವಿಷಬೀಜ ಬಿತ್ತಲು ಪ್ರಾರಂಭಿಸಿದರು. ಧರ್ಮದ ಆಧಾರದ ಮೇಲೆ ದೇಶ ನಿರ್ಮಾಣಗೊಳ್ಳುವುದಿಲ್ಲ .  ಬದಲಾಗಿ, ಸಂಸ್ಕೃತಿಯ ಮೇಲೆ ನಿರ್ಮಾಣಗೊಳ್ಳುತ್ತದೆ ಎಂಬ ಭಾರತೀಯರ ನಂಬಿಕೆಯನ್ನು ಬ್ರಿಟಿಷರು ಒಡೆದು ಹಾಕಿದರು ಎಂದು ತಿಳಿಸಿದರು.

ದೇಶವನ್ನು ಒಡೆಯಬೇಕೆಂಬ ಮೊಗಲರ ಪ್ರಯತ್ನ ಯಶಸ್ವಿಯಾಗಲಿಲ್ಲ. ಆದರೆ, ಕಾಂಗ್ರೆಸ್ಸಿಗರ ಅಧಿಕಾರದ ದುರಾಸೆಯಿಂದಾಗಿ ದೇಶ ವಿಭಜನೆಯಾಯಿತು. ಪಾಕಿಸ್ತಾನ ಮತ್ತು ಬಾಂಗ್ಲಾವನ್ನು ತುಂಡರಿಸಿದ್ದು ಭಾರತದ ದೊಡ್ಡ ಪ್ರಮಾದ ಎಂದರು.

ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾದರೂ ಪಾಕಿಸ್ತಾನಕ್ಕಿಂತ ಹೆಚ್ಚು ಮುಸ್ಲಿಂರು ಭಾರತದಲ್ಲಿ ಇದ್ದಾರೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಭಾರತ ಸುಪರ್ ಪವರ್ ಆಗಬಾರದೆಂಬ ದುರುದ್ದೇಶದಿಂದಾಗಿ ಅಮೆರಿಕ, ಚೀನಾದಂತಹ ರಾಷ್ಟ್ರಗಳು ಪಾಕಿಸ್ತಾನವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಇಡೀ ದೇಶ ಒಂದು ಕುಟುಂಬದ ಕೈಯಲ್ಲಿ ಇರಬೇಕೆಂಬ ರಾಜಕಾರಣಿಯ ದುರುದ್ದೇಶದಿಂದ ಭಾರತ ವಿಭಜನೆಯಾಯಿತು. ದೇಶದೊಳಗಿನ ದ್ರೋಹಿಗಳ ಮನಸ್ಥಿತಿ ಬದಲಾಗಬೇಕು. ರಾಷ್ಟ್ರದ ಬಗ್ಗೆ ಅಭಿಮಾನ ಇಲ್ಲದವರು ವಿದೇಶಗಳಿಗೆ ಹೋಗಿ ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಉಪ ಮಹಾಪೌರ ಸಂತೋಷ ಚವ್ಹಾಣ, ಸುದೀಂದ್ರ ದೇಶಪಾಂಡೆ, ಮಹೇಂದ್ರ ಕೌತಾಳ ಹಾಗೂ ಸತೀಶ ಶೇಜವಾಡಕರ ಇದ್ದರು.