ಜಿಲ್ಲೆ

ದೇಶದಲ್ಲಿ ಜನರ ಬದುಕಿಗೆ ಹತ್ತಿರವಾದ ಸಂವಿಧಾನವಿದೆ: ವಕೀಲ ಕೆ.ವಿ.ವಾಸು ಬಣ್ಣನೆ

ಮೈಸೂರು: ಅತಿ ಕಠಿಣವೂ ಅಲ್ಲದ, ಸುಲಭವೂ ಅಲ್ಲದ ನಿಯಮಗಳನ್ನು ಹೊಂದಿರುವ ಭಾರತದ ಸಂವಿಧಾನ ವಿಶ್ವದಲ್ಲಿಯೇ ವಿಶಿಷ್ಟವಾಗಿದೆ ಎಂದು ವಕೀಲ ಕೆ.ವಿ.ವಾಸು ಬಣ್ಣಿಸಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಸೋಮವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜನರ ಬದುಕಿಗೆ ಹತ್ತಿರವಾದ ಸಂವಿಧಾನವನ್ನು ರಚಿಸಿದರು. ಭಾರತದ ಸಂವಿಧಾನ ವಿಶ್ವದಲ್ಲೇ ಅತಿದೊಡ್ಡ ಸಂವಿಧಾನವಾಗಿದೆ ಎಂದು ಹೇಳಿದರು.
ಎಲ್ಲರನ್ನೂ ಒಳಗೊಳ್ಳುವ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕು. ಸುಪ್ರೀಂಕೋರ್ಟ್ ಬಲಿಷ್ಠವಾಗಿ ಕಾರ್ಯನಿರ್ವಹಿಸುವ ಮೂಲಕ ನಮಗೆ ಮೂಲಭೂತ ಹಕ್ಕುಗಳ ರಕ್ಷಣೆ ಮಾಡುವ ಕಾರ್ಯ ಮಾಡುತ್ತದೆ ಎಂದರು.
ವಿದ್ಯಾರ್ಥಿನಿಯರಿಗೆ ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲೆ ಡಾ. ಎಂ. ಶಾರದಾ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ತ್ರಿವೇಣಿ ಇತರರು ಇದ್ದರು.