ಜಿಲ್ಲೆ

8 ವಲಯಗಳಲ್ಲಿ 400 ಸುಸ್ತಿದಾರರ ಹೆಸರು ಬಹಿರಂಗಪಡಿಸಿದ ಪಾಲಿಕೆ

ಬೆಂಗಳೂರು: ನಗರದಲ್ಲಿ ಹೆಚ್ಚು ಮೊತ್ತದ ಆಸ್ತಿತೆರಿಗೆ ಬಾಕಿ ಉಳಿಸಿಕೊಂಡಿರುವವರ ಸ್ವತ್ತುದಾರರ ವಿವರವನ್ನು ಬಹಿರಂಗಪಡಿಸಿರುವ ಬಿಬಿಎಂಪಿ, ಬೇಗನೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ ಎಂಟೂ ವಲಯಗಳಿಗೆ ಸೇರಿದ ತಲಾ 50 ಸ್ವತ್ತುದಾರರಂತೆ ಒಟ್ಟು 400 ಆಸ್ತಿದಾರರ ಹೆಸರು, ಬಾಕಿ ಮೊತ್ತ ಸೇರಿ ಪೂರ್ಣ ವಿವರವನ್ನು ಬುಧವಾರ ಪ್ರಕಟಿಸಿದೆ.

ತೆರಿಗೆ ಪಾವತಿಸಲು ಸೆ.30ರವರೆಗೆ ಗಡುವು ವಿಸ್ತರಿಸಿದ್ದರೂ, ಇನ್ನೂ ಕೆಲ ಲಕ್ಷ ಮಂದಿ ಬಾಕಿ ಹಣ ಪಾವತಿಸಬೇಕಿದೆ. ಹೀಗಾಗಿ ಆಯಾ ವಲಯದಲ್ಲಿ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೂಲಕ ಆಯಾ ವಿಭಾಗದಲ್ಲಿ ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಪಾಲಿಕೆಯ ಕೇಂದ್ರ ಕಚೇರಿಗೆ ರವಾನಿಸಿದ್ದು, ಇಲ್ಲಿಂದಲೇ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಸುಸ್ತಿದಾರರ ಪೈಕಿ ಹೆಚ್ಚಿನವರು 2022-23ರಿಂದ ತೆರಿಗೆ ಪಾವತಿಸಿಲ್ಲ. ಕೆಲವರು ಮಾತ್ರ 2018-19ರಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಲಕ್ಷ ರೂ.ನಿಂದ ಕೋಟಿ ರೂ.ವರೆಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರಿಗೆ ಡಿಮಾಂಡ್ ನೋಟಿಸ್ ನೀಡಲಾಗುತ್ತಿದೆ. ಈ ಹಿಂದೆಯೂ ನೆನಪೋಲೆ ನೀಡಿದ್ದರೂ, ಈವರೆಗೂ ಬಾಕಿ ಪಾವತಿಸದ ಕಾರಣ ಎಲ್ಲ ವಲಯಗಳಲ್ಲೂ ದೊಡ್ಡ ಮೊತ್ತದ ಸುಸ್ತಿದಾರರಿಗೆ ಕಂದಾಯ ವಿಭಾಗದ ಅಧಿಕಾರಿಗಳು ನೋಟಿಸ್ ವಿತರಿಸುತ್ತಿದ್ದಾರೆ.