ಉಪ್ಪಿನಬೆಟಗೇರಿ: ಸಂಘದ ಅಭಿವೃದ್ಧಿಗೆ ಉತ್ತರೋತ್ತರವಾಗಿ ಶ್ರಮಿಸುತ್ತಿರುವ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಶ್ಲಾಘನೀಯವಾಗಿದೆ ಎಂದು ಪಿಕೆಪಿಎಸ್ ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ ಹೇಳಿದರು.
ಬುಧವಾರ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 6 ವರ್ಷಗಳಿಂದ ತಮ್ಮೆಲ್ಲರ ಸಹಕಾರದಿಂದ ಅಧ್ಯಕ್ಷನಾದ ನಾನು ಆಡಳಿತ ಮಂಡಳಿಯ ಮಾರ್ಗದರ್ಶನ ಹಾಗೂ ಸದಸ್ಯರ ಪೋ›ತ್ಸಾಹದಿಂದ ಎರಡು ವರ್ಷಗಳಿಂದ 11 ಲಕ್ಷ ರೂ.ಗಳ ನಿವ್ಹಳ ಲಾಭದಿಂದ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕೆಲ ಮಹತ್ವದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆಂದು ಗ್ರಾಮದಲ್ಲಿ ಸಂಘದಿಂದ 1 ಎಕರೆ ಜಮೀನು ಖರೀದಿ ಮಾಡುವ ಉದ್ದೇಶವಿದ್ದು, ತಮ್ಮೆಲ್ಲರ ಸಹಕಾರ ಇದೆ ರೀತಿ ಮುಂದುವರೆಯಲಿ ಎಂದರು.
ಸಂಘದ ಉಪಾಧ್ಯಕ್ಷ ವೀರಣ್ಣ ಪರಾಂಡೆ ಮಾತನಾಡಿ, ಸಂಘದಿಂದ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ಹೆಸರು ಮತ್ತು ಕಡಲೆ ಕೇಂದ್ರ ತೆರೆಯಲಾಗಿದ್ದು, ಸಾಕಷ್ಟು ರೈತರಿಗೆ ಅನುಕೂಲವಾಗಿದೆ ಎಂದರು.
ವಿದ್ಯಾದಾನ ಸಮಿತಿ ಗೌರವ ಕಾರ್ಯದರ್ಶಿ ಜಿ.ಆರ್. ಜವಳಗಿ ಮಾತನಾಡಿ, ಷೇರುದಾರರಿಗೆ ಈ ಬಾರಿ ನೀಡಿರುವ ವಾರ್ಷಿಕ ಸರ್ವ ಸಾಧಾರಣ ಸಭೆಯ ನೋಟಿಸ್ನಲ್ಲಿ ವಾರ್ಷಿಕ ಜಮಾ-ಖರ್ಚಿನ ಬಗ್ಗೆ ಮಾಹಿತಿ ಇಲ್ಲದ ಕಾರಣ ಸದಸ್ಯರಿಗೆ ಸರಿಯಾದ ಮಾಹಿತಿ ದೊರೆಯುವುದಿಲ್ಲ. ಮುಂದಿನ ಸಭೆಗೆ ಮಾಹಿತಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಲ್ಲಪ್ಪ ಅಷ್ಟಗಿ, ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿದರು.
ನಿರ್ದೇಶಕರಾದ ಕಲ್ಲಯ್ಯ ವಿಭೂತಿಮಠ, ಧರೆಪ್ಪ ಬೊಬ್ಬಿ, ಯಲ್ಲಪ್ಪ ತಳವಾರ, ಚಂದ್ರನಾಥ ಅಷ್ಟಗಿ, ಶಂಕರ ಪೂಜಾರ, ಉಮೇಶ ಮಸೂತಿ, ಈರಣ್ಣ ಮಡಿವಾಳರ, ಗಂಗಮ್ಮ ತಿಗಡಿಮಠ ಇದ್ದರು. ಮಹಮ್ಮದ ಸಲಿಂ ಖತೀಬ ಸಂಘದ ವಾರ್ಷಿಕ ವರದಿ ಓದಿದರು. ಕಾರ್ಯದರ್ಶಿ ಕಲ್ಲಪ್ಪ ಕಿತ್ತೂರ ನಿರ್ವಹಿಸಿದರು.