ಅರಸೀಕೆರೆಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಎಚ್.ಬಿ.ರಶ್ಮಿ ಮಾತನಾಡಿದರು. ಕೃಷ್ಣಕುಮಾರ್, ವಿಜಯಕುಮಾರ್, ನಟರಾಜ್, ಸಿದ್ದಮಲ್ಲಪ್ಪ, ಕಾವ್ಯಶ್ರೀಬಾಯಿ ಇತರರಿದ್ದರು. 
ಜಿಲ್ಲೆ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

ಅರಸೀಕೆರೆ: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅತ್ಯ ಎಂದು ಜೆಎಂಎಪ್‌ಸಿ ನ್ಯಾಯಲಯದ ನ್ಯಾಯಾಧೀಶೆ ಎಚ್.ಬಿ.ರಶ್ಮಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲರಿಗೂ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಹತ್ತು-ಹಲವು ಯೋಜನೆಗಳನ್ನು ರೂಪಿಸಿದೆ. ಕಲಿಯುವ ಹಂತದಲ್ಲಿ ಪಾಲಕರು ಮಕ್ಕಳನ್ನು ದುಡಿಮೆಗೆ ತಳ್ಳಿದರೆ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗಲಿದೆ ಎನ್ನುವುದನ್ನು ಮನಗಾಣಬೇಕಿದೆ. ಹೋಟೆಲ್, ಗ್ಯಾರೇಜ್ ಸೇರಿದಂತೆ ಇತರೆಡೆಗಳಲ್ಲಿ ಮಕ್ಕಳನ್ನು ಯಾರಾದರೂ ದುಡಿಸಿಕೊಳ್ಳಲು ಮುಂದಾದಲ್ಲಿ ಬಾಲಕಾರ್ಮಿಕ ಪದ್ಧತಿಯಡಿ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಕುಮಾರ್ ಮಾತನಾಡಿ, ಬಡತನ ಹಾಗೂ ಶಿಕ್ಷಣದ ಅರಿವಿನ ಕೊರತೆಯಿಂದಾಗಿ ಜೀತ ಹಾಗೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಬೇಸರದ ಸಂಗತಿಯಾಗಿದೆ. ಹದಿನಾಲ್ಕು ವರ್ಷ ವಯೋಮಾನದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಕಾನೂನು ರೀತಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಮುಖ್ಯಶಿಕ್ಷಕ ನಟರಾಜ್ ಮಾತನಾಡಿದರು. ವಕೀಲ ವಿಜಯಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಮಿಕ ನಿರೀಕ್ಷಕ ಪರುಶುರಾಮ್, ವಕೀಲರಾದ ಸಿದ್ದಮಲ್ಲಪ್ಪ, ಕಾವ್ಯಶ್ರೀಬಾಯಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.