ಮೈಸೂರು: ಕಾರ್ಮಿಕರ ಬೆವರಿನ ಶ್ರಮ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹೇಳಿದರು.
ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತ್ರದ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಮಿಕರ ಬದುಕು ಹಸನಾಗಬೇಕೆಂಬ ಹಂಬಲದಿಂದ ಕಾರ್ಮಿಕ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಕಾರ್ಮಿಕ ವಲಯಕ್ಕೆ ಸಂವಿಧಾನದಲ್ಲಿ ವಿಶೇಷ ಅವಕಾಶ ಹಾಗೂ ಭದ್ರತೆಯನ್ನು ಒದಗಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾತಂತ್ರ್ಯ ನಂತರದ ಮೊದಲ ಕಾರ್ಮಿಕ ಸಚಿವರಾದ ಬಾಬು ಜಗಜೀವನ್‌ರಾಮ್ ಅವರ ದೂರದೃಷ್ಟಿ ಕಾರ್ಮಿಕರು ಬದುಕಿ ಕಟ್ಟಿಕೊಳ್ಳಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ನಿರ್ದೇಶಕ ಡಾ. ನಾಗರಾಜ್ ವಿ ಬೈರಿ ಮಾತನಾಡಿ, ಕಾರ್ಮಿಕ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ದುಡಿಯುವ ವರ್ಗಕ್ಕೆ ಆರೋಗ್ಯ ಸೌಲಭ್ಯಗಳು, ವಿಮೆ ಹಾಗೂ ಕಾರ್ಮಿಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಶೇಷ ನೆರವು ನೀಡಲಾಗುತ್ತಿದೆ ಎಂದರು.
1886ರ ವರ್ಷದ ಮೇ 4ರಂದು ಷಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು, ಕಾರ್ಮಿಕರ ಸಂಘದ ಸಂಘಟನೆಗಳು ಉಂಟು ಮಾಡಿದ ಹೋರಾಟ, ಜಾಗೃತಿಯ ಫಲಶ್ರುತಿ ವರ್ತಮಾನಗಳಲ್ಲಿ ಕಾರ್ಮಿಕರ ಬದುಕು ಸುಧಾರಿಸುವಲ್ಲಿ ನೆರವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ರಾಷ್ಟ್ರದ ಪ್ರಗತಿಯಲ್ಲಿ ಅನನ್ಯ ಪಾತ್ರ ವಹಿಸುವ ಕಾರ್ಮಿಕರು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಕಾಯಕ ಯೋಗಿಗಳಂತೆ ದುಡಿದು ದೇಶದ ಪ್ರಗತಿಗೆ ಮಹತ್ತರ ಕಾಣಿಕೆ ನೀಡಿದ್ದಾರೆ ಹೀಗಿದ್ದರೂ, ಕಾರ್ಮಿಕರ ಸೇವೆಗೆ ಸಮಾನಾಂತರವಾದ ದುಡಿಮೆಗೆ ತಕ್ಕ ಗಳಿಕೆ ಸಿಗುತ್ತಿಲ್ಲ. ವೇತನದಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ ಇದನ್ನು ತಡೆಗಟ್ಟಿ ಎಲ್ಲ ನೌಕರರನ್ನು ಸಮಾನರಾಗಿ ಕಾಣುವ ದೃಷ್ಟಿ ಬೆಳೆಸಿಕೊಳ್ಳಬೇಕು ಎಂದರು.
ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಅಧ್ಯಕ್ಷ ಎನ್.ಬೆಟ್ಟೇಗೌಡ ಮಾತನಾಡಿ, ಕಾರ್ಮಿಕರ ಶ್ರಮವಿಲ್ಲದೆ ಯಾವ ಕೆಲಸವೂ ಕೂಡ ನಡೆಯುವುದಿಲ್ಲ. ಕಾರ್ಮಿಕರುಗಳು ಇಲ್ಲದೆ ಯಾವ ಕಾರ್ಖಾನೆಯೂ ಇಲ್ಲ, ಕಚೇರಿಗಳು ಕೂಡ ಇಲ್ಲ. ಎಲ್ಲ ವರ್ಗದ ಕಾರ್ಮಿಕರನ್ನು ಸರಿ ಸಮಾನವಾಗಿ ಕಾಣುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅಲೆಯನ್ಸ್ ಕ್ಲಬ್ ಆಫ್ ಮೈಸೂರ್ ನಾಲ್ವಡಿಯಿಂದ ದೇವೇಂದ್ರ, ಸುಂದರ್ ಹಾಗೂ ಸಲೀಂ ಅವರನ್ನು ಗೌರವಿಸಲಾಯಿತು. ಅಲೆಯನ್ಸ್ ಕ್ಲಬ್ ಅಫ್ ಇಂಟರ್‌ನ್ಯಾಷನಲ್ ಜಿಲ್ಲೆ 255ರ ಎರಡನೇ ಉಪ ಪ್ರಾಂತಪಲ ಸಂತೋಷ್ ಕುಮಾರ್, ಜಿಲ್ಲೆ 255ರ ಸಂಪುಟ ಕೋಶಾಧ್ಯಕ್ಷ ಕೃಷ್ಣಾಜಿರಾವ್, ಸಮಾಜ ಸೇವಕ ವಿಕ್ರಂ ಅಯ್ಯಂಗಾರ್ ಇದ್ದರು.