ಬಳ್ಳಾರಿ ; ಅಳಿವಿನಂಚಿನಲ್ಲಿರುವ ತೊಗಲುಗೊಂಬೆಯಾಟಕ್ಕೆ ನಾಡೋಜ ಬೆಳಗಲ್ಲು ವೀರಣ್ಣ ಆಧುನಿಕ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ಪ್ರದರ್ಶಿಸಿ ಜಾನಪದ ಮತ್ತು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಡಾ.ವಸುಂಧರಾ ಭೂಪತಿ ಹೇಳಿದರು.
ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶ್ರೀರಾಮಾಂಜನೇಯ ತೊಗಲುಬೊಂಬೆ ಮೇಳ ಟ್ರಸ್ಟ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಿರಿಯ ಕಲಾವಿದ ನಾಡೋಜ ಡಾ.ವಿ.ಟಿ.ಕಾಳೆ ಅವರಿಗೆ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ತೊಗಲು ಗೊಂಬೆ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿರುವ ನಾಡೋಜ ಬೆಳಗಲ್ಲು ವೀರಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಪ್ರಶಸ್ತಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಐದು ದಶಕಗಳ ಕಾಲ ವಾಸವಿದ್ದ ನಿವಾಸದ ಸಮೀಪದ ರೇಡಿಯೋ ಪಾರ್ಕ್ ರಸ್ತೆಗೆ ನಾಡೋಜ ಬೆಳಗಲ್ಲು ವೀರಣ್ಣ ಹೆಸರಿಡಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ನಾಡೋಜ ಡಾ.ವಿ.ಟಿ.ಕಾಳೆ ಮಾತನಾಡಿ, ಅಪ್ರತಿಮ ರಂಗ, ಜಾನಪದ ಕಲಾವಿದರಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದು ತಿಳಿಸಿದರು.
ತೊಗಲುಗೊಂಬೆ ಚಿತ್ರಗಳನ್ನು ಹೇಗೆ ರಚಿಸಬೇಕು ಎಂದು ಕಲಿಸಿದ್ದು ವೀರಣ್ಣ ಅವರು. ಸೌಮ್ಯ, ಸರಳ ಸಜ್ಜನಿಕೆಯ ವೀರಣ್ಣ ಬೌತಿಕವಾಗಿಯಷ್ಟೇ ನಮ್ಮನ್ನು ಅಗಲಿದ್ದಾರೆ. ಅವರ ಕಲಾ ಚೇತನ ಎಂದೆಂದಿಗೂ ಅಮರ ಎಂದು ಗುಣಗಾನ ಮಾಡಿದರು.