ಬೆಂಗಳೂರು: ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ಗಾನಯೋಗಿ ಪಂ.ಪುಟ್ಟರಾಜ ಗವಾಯಿ ದೊಡ್ಡ ಶಿಷ್ಯವೃಂದವನ್ನೇ ಸೃಷ್ಟಿಸಿದವರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದ್ದಾರೆ.
ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಅಂಗವಾಗಿ ಶ್ರೀ ಗುರು ಗಾನಲಹರಿ ಸಂಗೀತ ಅಕಾಡೆಮಿ ಶನಿವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ದಶಮಾನ ಸಂಗೀತೋತ್ಸವ ಹಾಗೂ ಪುಟ್ಟಶ್ರೀ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಂಗೀತದ ಮೂಲಕ ಮಾನವೀಯತೆ ಹಾಗೂ ಸರಳತೆಯನ್ನು ಬದುಕಿನುದ್ದಕ್ಕೂ ಪಸರಿಸಿದ ಪುಟ್ಟರಾಜ ಗವಾಯಿಯವರು ಶ್ರೀ ವೀರೇಶ್ವರ ಪುಣ್ಯಾಶ್ರಮ ಕಟ್ಟಿ ಸಾವಿರಾರು ಗಾಯಕರಿಗೆ ಹಿಂದೂಸ್ತಾನಿ ಸಂಗೀತ ಕಲಿಸಿಕೊಟ್ಟಿದ್ದಾರೆ. ಅವರ ಹೊರಗಣ್ಣು ಕುರುಡಾಗಿದ್ದರೂ ಒಳಗಣ್ಣಿನ ಬೆಳಕಿನಿಂದ ಜಗತ್ತನ್ನು ನೋಡಿದ ಪರಿ ಅನನ್ಯ. ತಮ್ಮ ಆಶ್ರಮದ ಮೂಲಕ ಬೆಳಕನ್ನೂ ಹೊರಗೂ ಹರಿಸಿದ ಮಹಾನುಭಾವರು ಎಂದರು.
ಅವರೇ ಕಾರಣ: ಸಿನಿಮಾದಲ್ಲಿ ಉತ್ತಮ ಸಂಗೀತ ನೀಡುವುದಕ್ಕೆ ಪಂಚಾಕ್ಷರಿ ಗವಾಯಿಗಳೇ ಕಾರಣ. ಅವರ ಜೀವನ ಚರಿತ್ರೆ ಆಧರಿಸಿ ಕನ್ನಡದಲ್ಲಿ ಸಿನಿಮಾ ಮಾಡಲು ಹೊರಟಿದ್ದೆ. ಆದರೆ, ಬೇರೆಯವರು ಆ ಪ್ರಯತ್ನಕ್ಕೆ ಕೈಹಾಕಿದ್ದರಿಂದ ಕೈಬಿಟ್ಟೆ. ನಂತರ, ಹಿಂದಿ ಅವತರಣಿಕೆಯಲ್ಲಿ ಸಿನಿಮಾ ಮಾಡುವ ಉದ್ದೇಶವೂ ಈಡೇರಲಿಲ್ಲ ಎಂದು ನಾಗಾಭರಣ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮಾತನಾಡಿ, ತಬಲ ವಾದಕದಲ್ಲಿ ಪಂಡಿತ್ ಎಂ.ನಾಗೇಶ್ ದೊಡ್ಡ ಕಲಾವಿದರಾಗಿದ್ದಾರೆ. ಅವರ ಸಾಧನೆ ಗುರುತಿಸಿ ಪ್ರತಿಷ್ಠಿತ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. ಇವರ ಸಾಧನೆ ಯುವ ಕಲಾವಿದರಿಗೆ ಮಾದರಿಯಾಗಿದೆ ಎಂದರು.
ಪ್ರಶಸ್ತಿ, 25 ಸಾವಿರ ರೂ.ಹಾಗೂ ಸ್ಮರಣಿಕೆ ಒಳಗೊಂಡಿದೆ. ಸಫೈರ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ವೆುಂಟ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ಬಸವ ರಾಜ ಅನಗೊಂದೆ, ಕವಿಯತ್ರಿ ಕಸ್ತೂರಿ ಡಿ.ಪತ್ತಾರ್, ಗಾಯಕ ಶಿವಶಂಕರ ಶಾಸ್ತ್ರಿ ಇತರರಿದ್ದರು.
ಸಂಗೀತ ಕಛೇರಿ
ಸಭಾ ಕಾರ್ಯಕ್ರಮ ನಡೆದ ಬಳಿಕ ಅಕಾಡೆಮಿ ಅಧ್ಯಕ್ಷ ಹಾಗೂ ಪಂಡಿತ್ ಶಿವಾನಂದ್ ಹೇರೂರ್ ವಿದುಷಿ ಮಾಲಾಶ್ರೀ ಕಣವಿ ಹಾಗೂ ಶಂಕರಯ್ಯ ಗುರುಮಠ ಕಲ್ಲೂರ್ ಅವರು ಹಿಂದುಸ್ತಾನಿ ಸಂಗೀತವನ್ನು ಸಾದರಪಡಿಸಿದರು. ವಿದ್ಯಾರ್ಥಿಗಳು ಸಾಮೂಹಿಕ ಗಾಯನವನ್ನು ಪ್ರಸ್ತುತಪಡಿಸಿದರು.
ಸದಾ ಕಾಲ ನಮ್ಮ ಕರ್ತವ್ಯವನ್ನು ಮಾಡುತ್ತಿದ್ದರೆ ಭವಿಷ್ಯದಲ್ಲಿ ಇದರ ಫಲ ಸಿಕ್ಕೇ ಸಿಗುತ್ತದೆ. ಪ್ರಶಸ್ತಿಗಾಗಿ ನಾನು ಎಂದಿಗೂ ಅರ್ಜಿ ಹಾಕಿಲ್ಲ. ತಾನಾಗಿಯೇ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ. | ಪಂಡಿತ್ ಎಂ. ನಾಗೇಶ್, ಪುಟ್ಟಶ್ರೀ ಪ್ರಶಸ್ತಿ ಪುರಸ್ಕೃತರು