ಬಾದಾಮಿ: ಸನಾತನ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅಗ್ರಸ್ಥಾನವಿದ್ದು, ಸಮಾಜದ ಪ್ರಗತಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ, ನೂತನ ಜಿಪಿಟಿ ಶಿಕ್ಷಕರ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನ್ನ ಒಂದು ಹೊತ್ತಿನ ಹಸಿವು ನೀಗಿಸಿದರೆ, ಶಿಕ್ಷಣ ಸಾಯುವವರೆಗೂ ವ್ಯಕ್ತಿ ಹಾಗೂ ಆತನ ಅವಲಂಬಿತರಿಗೆ ಅನ್ನ ಗಳಿಸುವ ಜ್ಞಾನ ನೀಡುತ್ತದೆ. ಆದ್ದರಿಂದ ಯುವ ಶಿಕ್ಷಕರು ಮಾತೃಹೃದಯದಿಂದ ಸಮಾಜದ ಬದಲಾವಣೆಗಾಗಿ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಪಿಟಿ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶಿವಯೋಗಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಬಾದಾಮಿ ತಾಲೂಕಿನಲ್ಲಿ 2016 ರಿಂದ ಇಲ್ಲಿಯವರೆಗೆ 250 ಶಿಕ್ಷಕರು ನೇಮಕಗೊಂಡು ಹಿರಿಯ ಪ್ರಾಥಮಿಕ ತರಗತಿಗಳಿಗೆ ಪಾಠಬೋಧನೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣಕ್ಕೆ ಎಲ್ಲರೊಂದಿಗೆ ಕೈಜೋಡಿಸಿ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ರಾಮದುರ್ಗದ ಬೆಂಬಳಗಿ ಕಾಲೇಜಿನ ಆಡಳಿತಾಧಿಕಾರಿ ಲೇಪಾಕ್ಷಿ ಎಸ್. ಉಪನ್ಯಾಸ ನೀಡಿ, ಯುವ ಶಿಕ್ಷಕರು ತರಬೇತಿಯೊಂದಿಗೆ ಎರಡೆರಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಸರ್ಕಾರಿ ಶಾಲೆ ಶಿಕ್ಷಕರಾಗಿ ನೇಮಕಗೊಂಡಿದ್ದೀರಿ. ತಾವು ಶಿಕ್ಷಕರಾಗಿ ನೇಮಕಗೊಳ್ಳಲು ಹಾಕಿದ ಶ್ರಮ, ತೋರಿದ ಉತ್ಸಾಹವನ್ನು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಕಾಳಜಿವಹಿಸಬೇಕು ಎಂದರು.
ಬಾದಾಮಿ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಎಚ್. ಹಳಗೇರಿ ಮಾತನಾಡಿ, ಬಾದಾಮಿ ಚಾಲುಕ್ಯರ ಈ ನಾಡು ವಾಸ್ತುಶಿಲ್ಪ ಕಲೆಯಲ್ಲಿ ವಿಶ್ವಮಾನ್ಯತೆ ಪಡೆದಂತೆ ಶೈಕ್ಷಣಿಕ ರಂಗದಲ್ಲಿ ಎತ್ತರದ ಸಾಧನೆ ಮಾಡುವಂತಾಗಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಶಿಕ್ಷಕರು ಉತ್ತಮ ಬೋಧನಾ ಕೌಶಲ ರೂಢಿಸಿಕೊಳ್ಳಬೇಕೆಂದರಲ್ಲದೆ, ಶಿಕ್ಷಕರ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ ತಮ್ಮೊಂದಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಶಿಕ್ಷಣ ಸಂಯೋಜಕ ಬಿ.ಕೆ. ಚಿಮಲ್, ವೈ.ಬಿ. ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎ್. ಕುಂಬಾರ, ಎಂ.ಎ. ಕೇಸರಿ, ಎಸ್.ವಿ. ತೋಟಗೇರ, ನೂತನ ಜಿಪಿಟಿ ಶಿಕ್ಷಕ ಶಿಕ್ಷಕಿಯರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಡಾ. ರಂಗಪ್ಪ ತಳವಾರ, ಹುಸೇನ ಚಿಕ್ಕೂರ, ಶ್ರೀಕಾಂತ ಧಡಿ, ಜಗದೀಶ ರೊಟ್ಟಿ, ಬಸವರಾಜ ಬಸರಿ. ಕೃಷ್ಣಾ ಕೇಲೂರ, ಹಣಮಂತ ಕುರಿ, ಕುಮಾರ ವಡ್ಡರ, ಹುಸೇನಭಾಷಾ ಬಾಗವಾನ, ರಾಮಚಂದ್ರ ಅಂಕದ, ನವೀನ ಕಂಬಾರ, ಎಸ್.ವಿ. ತಳವಾರ, ಸವಿತಾ ದೇವಾಡಿಗ ಸುಮನ್ ಜೋಗಿ ಮತ್ತಿತರರು ಭಾಗವಹಿಸಿದ್ದರು.