ಹೂವಿನಹಿಪ್ಪರಗಿ: ಭಾರತೀಯರು ಪವಿತ್ರ ದೇವಾಲಯಗಳನ್ನು ನಿರ್ಮಿಸುವ ಮೂಲಕ ಭವಿಷ್ಯದಲ್ಲಿ ಯಾರು ಅಳಿಸಲಾಗದ ಇತಿಹಾಸ ನಿರ್ಮಿಸಿದ್ದಾರೆ.
ಮಠ-ಮಾನ್ಯಗಳು ಕೂಡ ನಾಡಿಗೆ ಅಮೂಲ್ಯ ಕೊಡುಗೆ ನೀಡಿವೆ ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕೆ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಸಮೀಪದ ಜಾಯವಾಡಗಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೋಮನಾಥ ವ, ಶಿವಪ್ಪ ಮುತ್ಯಾ ಅವರ ಜೀರ್ಣೋದ್ಧಾರಗೊಂಡ ನೂತನ ದೇವಾಲಯಗಳ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಸಂತ ಶಿಶುನಾಳ ಷರೀರ ಮಹಾಪುರಾಣ ಮಹಾಮಂಗಲ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರದ್ಧೆ, ಭಕ್ತಿ, ಸಂಕಲ್ಪದಿಂದ ಮನುಷ್ಯನಲ್ಲಿ ನೈತಿಕತೆ ಬೆಳವಣಿಗೆಯಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಶ್ರೀಕ್ಷೇತ್ರದ ಅಭಿವೃದ್ಧಿಗಾಗಿ ಹಂತ ಹಂತವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಳೆದ ಬಾರಿಯ ಕಾಂಗ್ರೆಸ್ ಅಧಿಕಾರವಧಿಯಲ್ಲಿ ನೀರಾವರಿ ಸಚಿವನಾಗಿ ವಿಜಯಪುರ ಜಿಲ್ಲೆಯ ನೀರಾವರಿಗಾಗಿ ಸಾಕಷ್ಠು ಶ್ರಮಿಸಿದ್ದೇನೆ.
ಬೂದಿಹಾಳ-ಪೀರಾಪುರ ಯೋಜನೆ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯ ಕೊಡುಗೆಯಾಗಿದೆ. 1000 ಕಿ.ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡುವ ಜತೆಗೆ ನೀರಾವರಿಗಾಗಿ 9 ಸ್ಥಾವರಗಳನ್ನು ನಿರ್ಮಾಣ ಮಾಡಲು 14 ಸಾವಿರ ಕೋಟಿ ರೂ. ಅನುದಾನ ವ್ಯಯಿಸಲಾಗಿದೆ ಎಂದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಜಾಯವಾಡಗಿ ಶ್ರೀಕ್ಷೇತ್ರ ಪವಿತ್ರ ಹಾಗೂ ದಿವ್ಯ ಕ್ಷೇತ್ರವಾಗಿದೆ. ಸಾಕಷ್ಟು ಗಂಭೀರ ಕಾಯಿಲೆಗಳನ್ನು ವೈದ್ಯರಿಂದ ನಿವಾರಣೆ ಮಾಡಲು ಆಗದ್ದು ಶ್ರೀಕ್ಷೇತ್ರದ ಮಹಿಮೆಯಿಂದ ನಿವಾರಣೆಯಾದ ಉದಾಹರಣೆಗಳಿವೆ ಎಂದರು.
ಇಂಗಳೇಶ್ವರದ ವಚನಶಿಲಾ ಮಂಟಪದ ಚನ್ನಬಸವ ಶ್ರೀಗಳು ಆಶೀರ್ವಚನ ನೀಡಿದರು. ಅಡವಿಲಿಂಗ ಮಹಾರಾಜರು, ಸರೂರು-ಅಗತೀರ್ಥದ ರೇವಣಸಿದ್ಧೇಶ್ವರ ಶಾಂತಮಯ ಸ್ವಾಮೀಜಿ, ಅರಳಿಚಂಡಿಯ ಪರಮಾನಂದ ಸ್ವಾಮೀಜಿ, ಪಡೇಕನೂರದ ಮಲ್ಲಿಕಾರ್ಜುನ ಶ್ರೀಗಳು, ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ಯರಜೇರಿ ಯಲ್ಲಾಲಿಂಗ ಮಠ ಮಲ್ಲಾರಲಿಂಗ ಶ್ರೀಗಳು, ವಡವಡಗಿಯ ವೀರಸಿದ್ದ ಶ್ರೀಗಳು, ಹೂವಿನಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು, ಹುಣಶ್ಯಾಳ ಪಿ.ಬಿಯ ಆನಂದ ದೇವರು ಇತರರಿದ್ದರು.
ದೇವಾಲಯ ಟ್ರಸ್ಟ್ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್.ಪಾಟೀಲ(ಯಾಳಗಿ), ಡಾ.ಪ್ರಭುಗೌಡ ಲಿಂಗದಳ್ಳಿ, ಸಂತೋಷಗೌಡ ದೊಡಮನಿ, ಆದರ್ಶ ಶಿಕ್ಷಕರ ವೇದಿಕೆಯ ಅಧ್ಯಕ್ಷ ಉಮೇಶ ಕವಲಗಿ, ರವಜಾನ ಮುಜಾವರ, ಬಾಳಾಸಾಹೇಬಗೌಡ ಪಾಟೀಲ, ಪರಶುರಾಮ ಪೂಜಾರಿ, ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಶಿವಾನಂದ ದೇಸಾಯಿ, ಸಂಗನಗೌಡ ಪಾಟೀಲ (ಸಾಸನೂರ) ರಮೀಜಾ ನದಾಫ್ ಇತರರಿದ್ದರು. ಪ್ರಭುದೇವ ಹಿರೇಮಠ ಸ್ವಾಗತಿಸಿದರು. ಕೊಟ್ರೇಶಿ ಹೆಗಡ್ಯಾಳ ನಿರೂಪಿಸಿದರು.