ತಿ.ನರಸೀಪುರ: ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಮಠ, ಮಾನ್ಯಗಳ ಪಾತ್ರ ಬಹು ದೊಡ್ಡದಿದ್ದು, ಎಲ್ಲ ಮಠಗಳು ಧಾರ್ಮಿಕ ಮತ್ತು ದಾಸೋಹ ಸೇವೆ ಸಲ್ಲಿಸುತ್ತಿವೆ ಎಂದು ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರಗೌಡ ಹೇಳಿದರು.
ತಾಲೂಕಿನ ತಲಕಾಡು ಹಸ್ತೀಕೇರಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಅವರ 107ನೇ ಗಣಾರಾಧನೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಲಕಾಡು ಗ್ರಾಮದಲ್ಲಿರುವ ಹಸ್ತಿಕೇರಿ ಮಠ ಪುರಾತನವಾಗಿದ್ದು, ಧಾರ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ ಎಂದರು.
ಹಸ್ತೀಕೇರಿ ಮಠದಲ್ಲಿ ಲಿಂಗೈಕ್ಯ ಸಿದ್ದಮಲ್ಲಿಕಾರ್ಜುನ ಶ್ರೀಗಳ 107ನೇ ಗಣಾರಾಧನೆಯನ್ನು ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿಸಲಾಯಿತು. ಪತಂಜಲಿ ಯೋಗಾಶ್ರಮ ಟಸ್ಟ್ ಅಧ್ಯಕ್ಷ ಪ್ರಕಾಶ್ ಯೋಗಿ ಮಾತನಾಡಿದರು. ಹಸ್ತಿಕೇರಿ ಮಠದ ಸಂಕ್ಷಿಪ್ತ ಪರಿಚಯವನ್ನು ನಿವೃತ್ತ ಶಿಕ್ಷಕರ ಕುಮಾರ, ಡಾ.ಸಿದ್ದಮಲ್ಲಿಕಾರ್ಜುನ ಶ್ರೀಗಳ ಸಂಕ್ಷಿಪ್ತ ಪರಿಚಯವನ್ನು ತಲಕಾಡಿನ ವೈದ್ಯನಾಥೇಶ್ವರ ದೇವಸ್ಥಾನದ ಪ್ರಧಾನ ಆಗಮಿಕ ಆನಂದ ದೀಕ್ಷಿತ್ ನಡೆಸಿಕೊಟ್ಟರು.
ಲಿಂಗೈಕ್ಯ ಸಿದ್ಧಮಲ್ಲಿಕಾರ್ಜುನ ಶ್ರಿಗಳ ಭಾವಚಿತ್ರವನ್ನು ದೇಗುಲ ಮಠದ ಚನ್ನಬಸವ ಶ್ರೀಗಳು ಲೋಕಾರ್ಪಣೆ ಮಾಡಿದರು. ಶ್ರೀ ರುದ್ರಾಕ್ಷಿ ಪೂಜಾ ಮಂಟಪವನ್ನು ನೆಲಮಂಗಲದ ಪವಾಡ ಬಸವಣ್ಣ ದೇವರು ಮಠದ ಶ್ರೀಗಳು ಹಸ್ತಿಕೇರಿ ಮಠಕ್ಕೆ ಹಸ್ತಾಂತರಿಸಿದರು. ಕನಕಪುರದ ದೇಗುಲ ಮಠದ ಶ್ರೀಚನ್ನಬಸವ ಸ್ವಾಮೀಜಿ, ನೆಲಮಂಗಲ ಮಠದ ಶ್ರೀಪವಾಡ ಸಿದ್ದಲಿಂಗ ಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ಮಠದ ಶ್ರೀಮಹಾಂತ ಸ್ವಾಮೀಜಿ, ಶ್ರೀಶಂಕರ ಸ್ವಾಮೀಜಿ, ಶ್ರೀಮೃತ್ಯುಂಜಯ ಸ್ವಾಮೀಜಿ, ಶ್ರೀಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶ್ರೀನಂದಿಕೇಶ್ವರ ಸ್ವಾಮೀಜಿ, ಸಿದ್ದರಬೆಟ್ಟ ಶ್ರೀಕುಂದೂರು ಸ್ವಾಮೀಜಿ, ಧರ್ಮದರ್ಶಿ ಬಸವಣ್ಣ ಇತರರಿದ್ದರು.