ವಿಜಯಪುರ: ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಬೆಳಗಾವಿ ಕೆಎಲ್ಇ ಸಂಸ್ಥೆಯ ಚೇರಮನ್ ಮತ್ತು ಕಾಹೆರ ಕುಲಾಧಿಪತಿ ಪ್ರಭಾಕರ ಬಿ. ಕೋರೆ ಹೇಳಿದರು.
ಶನಿವಾರ ನಗರದ ಬಿಲ್ಡಿಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ(ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸೀನ್)ದ ಉದ್ಘಾಟನೆ, ಡಾ. ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
19ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದ್ದ ಮುಂಬೈ ಕರ್ನಾಟಕದ ಬಾಗಲಕೋಟೆಯಲ್ಲಿ ಬಿವಿವಿಎಸ್, ವಿಜಯಪುರದಲ್ಲಿ ಬಿಎಲ್ಡಿಇ ಮತ್ತು ಬೆಳಗಾವಿಯಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು ಎಂದರು.
ಅಂದು ಈ ಭಾಗದ ಜನ ವೈದ್ಯರು, ನ್ಯಾಯವಾದಿಗಳಿಗಾಗಿ ಮಹಾರಾಷ್ಟ್ರದತ್ತ ಮುಖ ಮಾಡಬೇಕಾಗಿತ್ತು. ಮರಾಠಿ ಪ್ರಭಾವ ಹೆಚ್ಚಾಗಿದ್ದ ಈ ಭಾಗದಲ್ಲಿ ಆಗ ಹಾನಗಲ್ ಶಿವಯೋಗಿಗಳು, ಶಿರಸಂಗಿ ಲಿಂಗರಾಜ ದೇಸಾಯಿ, ಪಂಡಿತರಾವ ಚಿಕ್ಕೋಡಿ, ವಚನಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ. ಪಾಟೀಲರು, ಬಂಗಾರಮ್ಮ ಸಜ್ಜನ, ಸರ್. ಕಂಬಳಿ ಸಿದ್ದಪ್ಪ, ಅರಟಾಳು ರುದ್ರಗೌಡರಂಥ ಮೇಧಾವಿ ಮತ್ತು ದಾನಿಗಳ ಸಹಕಾರದಿಂದ ಈ ಭಾಗದಲ್ಲಿ ಎಲ್ಲ ಸಮುದಾಯಗಳಿಗೆ ಶಿಕ್ಷಣ ಸೌಲಭ್ಯ ನೀಡಲಾಯಿತು. ಇದರಿಂದ ಸರ್ವಜನರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಯಿತು ಎಂದರು.
ಈ ಸಂಸ್ಥೆಗಳಲ್ಲಿ ಓದಿದ ವೈದ್ಯರು ಇಂದು ಅಂಗಾಂಗ ಕಸಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮೂಲಕ ರೋಗಿಗಳಿಗೆ ಮರುಜೀವ ನೀಡುತ್ತಿದ್ದಾರೆ. ಅಂದು ಸ್ಥಾಪಿಸಿದ ಬಿಎಲ್ಡಿಇ ಸಂಸ್ಥೆಯನ್ನು ಇಂದು ಎಂ.ಬಿ. ಪಾಟೀಲರು ಹೆಮ್ಮರವಾಗಿ ಬೆಳೆಸಿದ್ದಾರೆ. ಸಚಿವರಾಗಿ ಈ ಭಾಗದಲ್ಲಿ ಜಲಕ್ರಾಂತಿ ಮಾಡಿದ್ದಾರೆ. ಆ ಮೂಲಕ ಈ ಭಾಗದ ಸರ್. ಎಂ. ವಿಶ್ವೇಶ್ವರಯ್ಯ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಿಎಲ್ಡಿಇ ಸಂಸ್ಥೆಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಿಸುವ ಮೂಲಕ ಎಲ್ಲ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯಗಳನ್ನು ಒದಗಿಸಿ ಉತ್ತರ ಕರ್ನಾಟಕದಲ್ಲಿಯೇ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮಾಡಿದ್ದಾರೆ. ಕೆಎಲ್ಇ ವೈದ್ಯರನ್ನು ಇಲ್ಲಿಗೆ ತರಬೇತಿಗೆ ಕಳುಹಿಸುತ್ತೇನೆ. ಬಿಎಲ್ಡಿಇ ಸಂಸ್ಥೆ ಬೆಂಗಳೂರಿನಲ್ಲಿಯೂ ಒಂದು ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವುದನ್ನು ನೋಡುವ ಆಸೆ ನನ್ನದಾಗಿದೆ ಎಂದು ಅವರು ಹೇಳಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ಶತಮಾನದ ಹಿಂದೆ ಮೈಸೂರು ಭಾಗದಲ್ಲಿ ಅಲ್ಲಿನ ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಅಲ್ಲಿನ ಜನರಿಗೆ ಅನುಕೂಲ ಕಲ್ಪಿಸಿದ್ದರು. ಆದರೆ, ಉತ್ತರ ಕರ್ನಾಟಕದಲ್ಲಿ ಮಾತ್ರ ಸೂಕ್ತ ಶೈಕ್ಷಣಿಕ ಸೌಲಭ್ಯಗಳಿಲ್ಲದ ಕಾರಣ ಈ ಭಾಗದ ಜನ ಆರ್ಥಿಕವಾಗಿಯೂ ಹಿಂದುಳಿಯುವಂತಾಗಿತ್ತು. ಆದರೆ, ಫ. ಗು. ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ. ಎಂ. ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಅವರಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಬಿಎಲ್ಡಿಇ ಸಂಸ್ಥೆ, ಶ್ರೀ ಸಿದ್ಧೇಶ್ವರ ಸಂಸ್ಥೆ, ಶ್ರೀ ಸಿದ್ಧೇಶ್ವರ ಬ್ಯಾಂಕ್, ಬರ ನಿರ್ವಹಣಾ ಸಂಸ್ಥೆ, ಭೂತನಾಳ ಕೆರೆಗಳು ನಿರ್ಮಾಣವಾದವು. ಹಳಕಟ್ಟಿಯವರು ಸಂಶೋಧನೆಯ ಮೂಲಕ 250 ಶರಣರು ಮತ್ತು ಅವರ ಸುಮಾರು 10 ಸಾವಿರ ವಚನಗಳನ್ನು ಬೆಳಕಿಗೆ ತಂದು ವಚನಗುಮ್ಮಟ ಎನಿಸಿಕೊಂಡರು. ಬಂಥನಾಳ ಶ್ರೀಗಳು ಶಿಕ್ಷಣಕ್ಕೆ ಒತ್ತು ನೀಡಿದರೆ, ಬಂಗಾರಮ್ಮ ಸಜ್ಜನ ಬಿಎಲ್ಡಿಇ ಸಂಸ್ಥೆಗೆ ತಮ್ಮ ಜಮೀನು ದಾನ ಮಾಡಿದರು. ಬಿ.ಎಂ. ಪಾಟೀಲ ಅವರು ಇಂಜಿನಿಯರಿಂಗ್, ಮೆಡಿಕಲ್ ಮತ್ತು ಬಿಇಡಿ ಕಾಲೇಜು ಪ್ರಾರಂಭಿಸಿ ನಮ್ಮ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಿಗಲು ಕಾರಣರಾದರು. ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸರ್ವಜನರು ಸುಖವಾಗಿರಲಿ ಎಂಬುದು ಅಂದಿನ ಮಹನೀಯರ ಆಶಯವಾಗಿತ್ತು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಯಡಿಯೂರು-ಗದಗ-ಡಂಬಳ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಒಂದು ಶತಮಾನದ ಹಿಂದೆ ಶಿಕ್ಷಣ ಮರಿಚಿಕೆಯಾಗಿದ್ದ ಈ ಭಾಗದಲ್ಲಿ ಬಡತನ ಮತ್ತು ದಾರಿದ್ರ್ಯ ಹೆಚ್ಚಾಗಿತ್ತು. ಆಗ ಬಿವಿವಿಎಸ್, ಬಿಎಲ್ಡಿಇ ಮತ್ತು ಕೆಎಲ್ಇ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಅಂದಿನ ಶರಣರು ಶೈಕ್ಷಣಿಕ ಕ್ರಾಂತಿ ಮಾಡಿದರು. ನಿಂದನೆಗೆ ಹೆದರದೆ, ಟೀಕೆಗಳಿಗೆ ಕುಗ್ಗದೆ ತನು, ಮನ, ಧನದಿಂದ ಈ ಭಾಗದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೇರೂರಲು ಮತ್ತು ಈ ಮೂಲಕ ಸಾಮಾಜಿಕ, ಆರ್ಥಿಕವಾಗಿ ಇಲ್ಲಿನ ಜನ ಸ್ವಾವಲಂಬಿಯಾಗಲು ಅಮೂಲ್ಯ ಕೊಡುಗೆ ನೀಡಿದರು. ಅಂದಿನಿಂದ ಇಂದಿನವರೆಗೂ ಲಿಂಗಾಯಿತ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ಸಮಾಜದ ಸರ್ವಜನರ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ ಎಂದರು.
ಟ್ರಾಮಾ ಸೆಂಟರ್ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಇಂಜಿನಿಯರ್ ಜಿ.ಎಂ. ದುದ್ದಗಿ, ಯು.ಎನ್. ಕರಡಿ, ರಾಜು ಪಡಗಾನೂರ, ಶಾಸ್ತ್ರಿ, ರವಿ ಹೊಸಕೋಟೆ, ರಂಗರಾಜು ಇವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಬಿಎಲ್ಡಿಇ ಸಂಸ್ಥೆಯನ್ನು ಕಟ್ಟಿದ ನಾಲ್ಕು ಮಹನೀಯರ ಕುರಿತ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಟ್ರಾಮಾ ಸೆಂಟರ್ ಆಡಳಿತಾಧಿಕಾರಿ ಡಾ. ಶರಣಪ್ಪ ಕಟ್ಟಿ, ಡಾ. ರಾಜೇಶ ಹೊನ್ನುಟಗಿ, ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಶಾಸಕ ವಿಠಲ ಧೋಂಡಿಬಾ ಕಟಕದೊಂಡ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತಿತರರಿದ್ದರು.
ಶ್ರೀ ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿಆರ್‌ಒ ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಮೆಹರವಾಡೆ, ಡಾ. ಆರ್.ಎಸ್. ಮುಧೋಳ ವಂದಿಸಿದರು.