ಮುಧೋಳದ ನಗರದ ಬಿವಿವಿ ಸಂಘದ ದಾನಮ್ಮ ದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಾಗಾರವನ್ನು ಚಂದ್ರಶೇಖರ ಸ್ವಾಮಿಗಳು ಉದ್ಘಾಟಿಸಿದರು. ಸುಶಿಲೇಂದ್ರಾಚಾರ್ಯ ಕುಂದರಗಿ, ಎಂ.ಎಂ. ಹಿರೇಮಠ, ಎಸ್.ಕೆ. ಸಾರವಾಡ ಇದ್ದಾರೆ. 
ಜಿಲ್ಲೆ

ಹಳಗನ್ನಡಕ್ಕೆ ಜೈನ ಕವಿಗಳ ಕೊಡುಗೆ ಅಪಾರ

ಮುಧೋಳ: ಹಳಗನ್ನಡವು ಶುದ್ಧ ಕನ್ನಡದ ರಸರೂಪವಿದ್ದಂತೆ. ಅದರ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರವಾದುದು ಎಂದು ಲೊಕಾಪುರದ ಬಸವೇಶ್ವರ ಮಹಿಳಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಶೇಖರ ಹಿರೇಮಠ ಹೇಳಿದರು.

ನಗರದ ಬಿವಿವಿ ಸಂಘದ ದಾನಮ್ಮ ದೇವಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಕಾಲೇಜಿನ ಐಕ್ಯೂಎಸಿ ಘಟಕ, ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಎರಡು ದಿನಗಳ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಳಗನ್ನಡ ಕಾವ್ಯವು ನೋಡಲು ಕಬ್ಬಿಣದ ಕಡಲೆಯಂತೆ ಕಂಗೊಳಿಸಿದರೂ ಬಿಡಿಸಿ ನೋಡಿದರೆ ಹಲಸಿನ ಹಣ್ಣಿನ ತೊಳೆಯಷ್ಟು ರುಚಿಯಾಗಿರುತ್ತದೆ. ಪಂಪ, ರನ್ನ, ಪೊನ್ನ ಹಾಗೂ ನಾಗಚಂದ್ರರಂತಹ ಕವಿಗಳಿಂದ ರಚನೆಗೊಂಡ ಚಂಪೂಕಾವ್ಯಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲಾಗ್ರ ರತ್ನವಾಗಿವೆ ಎಂದರು.

ಪ್ರಾಚಾರ್ಯ ಎಂ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸಗನ್ನಡ ಸಾಹಿತ್ಯಕ್ಕಿಂತ ಹಳಗನ್ನಡ ಸಾಹಿತ್ಯ ಅರ್ಥೈಸಿಕೊಳ್ಳಲು ಬಹಳ ಸುಲಭವಾದದ್ದು. ಸ್ವಲ್ಪ ಮನವಿಟ್ಟು ಆಲಿಸಿ ಪದ ಬಿಡಿಸಿ ಓದಿದರೆ ಹಳಗನ್ನಡವು ಸುಲಿದ ಬಾಳೆಹಣ್ಣಿನಂತೆ ಎಂದರು.

ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿ ಸುಶಿಲೇಂದ್ರಾಚಾರ್ಯ ಕುಂದರಗಿ, ರನ್ನನ ಗದಾಯುದ್ಧ ವೈಶಾಂಪಾಯನ ಸರೋವರ ಕಥಾಪ್ರಸಂಗದ ರೋಚಕ ಕ್ಷಣ ಹಾಗೂ ರನ್ನನ ರಸಗ್ರಹಿಕೆಗಳನ್ನು ವಿವರಿಸಿದರು. ಎಸ್.ಕೆ. ಸಾರವಾಡ ಅಧ್ಯಕ್ಷತೆ ವಹಿಸಿದ್ದರು. ಎನ್.ಎನ್. ಬಾರಕೇರ, ಕೆ.ಎಲ್. ಗುಡಿಮನಿ, ಬಿ.ಕೆ. ಹಿರೇಮಠ, ಎ.ಎನ್. ಬಾಗೇವಾಡಿ ಇದ್ದರು.