ಸಾಗರ: ಕರಕುಶಲ ಕಲೆ ಮೂಲಕ ಗುಡಿಗಾರ ಸಮಾಜ ರಾಜ್ಯಾದ್ಯಂತ ಹೆಸರು ಗಳಿಸಿದ್ದು, ಕರಕುಶಲ ಪ್ರಪಂಚಕ್ಕೆ ಅತ್ಯುನ್ನತ ಕೊಡುಗೆ ನೀಡಿದವರಲ್ಲಿ ಗುಡಿಗಾರರು ಪ್ರಮುಖರು ಎಂದು ಅಖಿಲ ಭಾರತ ಗುಡಿಗಾರ ಸಮಾಜದ ರಾಜ್ಯಾಧ್ಯಕ್ಷ ವಿಜಯಕುಮಾರ್ ಜಡೆ ಹೇಳಿದರು.
ಶಾಂತವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಅಖಿಲ ಭಾರತ ಗುಡಿಗಾರರ ಸಮಾಜ ಮತ್ತು ಗುಡಿಗಾರ ಯುವ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಗುಡಿಗಾರ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಯುವಜನರು ಕ್ರೀಡೆ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗುಡಿಗಾರ ಹಬ್ಬವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಕ್ರೀಡೆ ಜತೆಗೆ ನಮ್ಮ ಸಂಸ್ಕೃತಿ ವಿನಿಮಯ ಮಾಡಲು ಸಹಕಾರಿಯಾಗಿದೆ. ಯುವಜನರು ಗುಡಿಗಾರ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಗುಡಿಗಾರ ಯುವ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಎಂ.ಗುಡಿಗಾರ್ ಮಾತನಾಡಿ, ಕರಕುಶಲ ಕಲೆ ಅತ್ಯಂತ ಶ್ರೇಷ್ಠವಾದದ್ದು, ನಮ್ಮ ಸಮುದಾಯ ಮೊದಲಿನಿಂದಲೂ ಕಲೆಯನ್ನು ಪೋಷಣೆ ಮಾಡಿಕೊಂಡು ಬರುತ್ತಿದೆ. ಕಾಲಕಾಲಕ್ಕೆ ಸಮಾಜವನ್ನು ಸಂಘಟಿಸಲು ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು.
ಉಪಾಧ್ಯಕ್ಷ ಜಗದೀಶ್ ಗುಡಿಗಾರ್, ಕಾರ್ಯದರ್ಶಿ ಮಹೇಶ್ ವಿ.ಗುಡಿಗಾರ್, ಸ್ಮಿತಾ ಸುಧಾಕರ ಗುಡಿಗಾರ್, ಲೋಕೇಶ್, ಕರಣ್, ಗಣೇಶ್, ನವೀನ್ ಇದ್ದರು.