ಜಿಲ್ಲೆ

ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್​ ಪ್ರಾಧ್ಯಾಪಕರ ಕೊಡುಗೆ ಅಪಾರ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಸೃಜನಶೀಲತೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿದ್ದ ಬಿ.ಎಂ. ಶ್ರೀಯವರು ಇಂಗ್ಲಿಷ್​ನ ಕೆಲ ಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದರು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ವಿ.ಟಿ. ನಾಯಕ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಮಲ್ಲಿಕಾರ್ಜುನ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಇಂಗ್ಲಿಷ್​ ಪ್ರಾಧ್ಯಾಪಕರ ಕೊಡುಗೆ ಕುರಿತು ಮಾತನಾಡಿದರು.


ಬೇರೆ ಬೇರೆ ಪತ್ರಿಕೆಯಲ್ಲಿ ಪ್ರಕಟಗೊಂಡ ಅನುವಾದಿತ ಗೀತೆಗಳನ್ನು 1926ರಲ್ಲಿ ಇಂಗ್ಲಿಷ್​ ಗೀತೆಗಳು ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದರು. ಕನ್ನಡ ಸಾಹಿತ್ಯದಲ್ಲಿ ಇದೊಂದು ಮೈಲುಗಲ್ಲಾಯಿತು. ಭಾವಗೀತೆ, ಸಣ್ಣಕಥೆ, ಕಾದಂಬರಿ, ಅನುವಾದ ಸಾಹಿತ್ಯ ಮೊದಲಾದ ಪ್ರಭೇದಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದನ್ನು ಕಾಣುತ್ತೇವೆ. ನಾಟಕ ಸಾಹಿತ್ಯದಲ್ಲಿ ದುರಂತ ನಾಟಕಗಳ ಕೊರತೆ ಇತ್ತು. ಭಾರತೀಯ ಪರಂಪರೆಯಲ್ಲಿದ್ದ ಈ ಕೊರತೆಯನ್ನು ಬಿ.ಎಂ. ಶ್ರೀಯವರು ರನ್ನನ ಮಹಾಕಾವ್ಯಗಳ ಮೂಲಕ ನಾಟಕ ರಚನೆಗೆ ಸೂಚನೆ ಕೊಟ್ಟರು ಎಂದರು.


ಅಧ್ಯತೆ ವಹಿಸಿದ್ದ ನಿವೃತ್ತ ಐಎಎಸ್​ ಅಧಿಕಾರಿ ಜಿ.ವಿ. ಕೊಂಗವಾಡ ಮಾತನಾಡಿ, ಇಂಗ್ಲಿಷ್ ಅಧ್ಯಯನ ಮಾಡಿದ ನಾನು ಅನೇಕ ಆಂಗ್ಲ ಪ್ರಾಧ್ಯಾಪಕರು ಬರೆದ ಕನ್ನಡ ಸಾಹಿತ್ಯವನ್ನು ಓದಿ ಜ್ಞಾನ ಹೆಚ್ಚಿಸಿಕೊಂಡಿದ್ದೇನೆ. ಕೆಲ ಪ್ರಾಧ್ಯಾಪಕರು ಅನುವಾದ ಮಾಡಿದ ಸಾಹಿತ್ಯ ಮನಸ್ಸಿನ ಮೇಲೆ ಅಪಾರವಾದ ಪರಿಣಾಮ ಬೀರಿದ್ದುಂಟು ಎಂದರು.


ಚಂದ್ರಕಾಂತ ಬೆಲ್ಲದ, ಡಾ. ಮಲ್ಲಿಕಾರ್ಜುನ ಪಾಟೀಲ, ಡಾ. ನಂದಾ ಪಾಟೀಲ, ಶಿವಾನಂದ ಭಾವಿಕಟ್ಟಿ, ಡಾ. ಸಿ.ಆರ್​. ಯರವಿನತೆಲಿಮಠ, ಸಿ.ಎಂ.ಕುಂದಗೋಳ, ಸಿ.ಎಸ್​. ಪಾಟೀಲ, ಎಸ್​.ಜಿ. ಪಾಟೀಲ, ನಿಂಗಣ್ಣ ಕುಂಟಿ, ಶಾಂತವೀರ ಬೆಟಗೇರಿ, ಡಾ. ಮಲ್ಲಿಕಾರ್ಜುನ ಹಿರೇಮಠ, ಶಿವಾನಂದ ಶೆಟ್ಟೆಣ್ಣವರ, ರಾಜೇಂದ್ರ ಸಾವಳಗಿ, ಬಿ.ಐ. ಈಳಿಗೇರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.