ಇಳಕಲ್ಲ(ಗ್ರಾ): ಪೌರಕಾರ್ಮಿಕರು ದೇಶದ ಆರೋಗ್ಯ ರಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಂದಲೇ ಊರು ಸ್ವಚ್ಛವಾಗಿರಲು ಸಾಧ್ಯ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ಸೋಮವಾರ ಹುನಗುಂದ ಪುರಸಭೆ ಮತ್ತು ಇಳಕಲ್ಲ ನಗರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರಲ್ಲದೆ, ಸದ್ಯದಲ್ಲೇ ಎರಡು ಎಕರೆ ಭೂಮಿಯಲ್ಲಿ ವಸತಿಗೃಹ ನಿರ್ಮಿಸಲಾಗುವುದೆಂದು ತಿಳಿಸಿದರು. ಉಪನ್ಯಾಸಕ ರಾಮನಗೌಡ ಸಂದಿಮನಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಮನಸೂರ ಮಠದ ಬಸವದೇವರು ಸಾನ್ನಿಧ್ಯ ವಹಿಸಿದ್ದರು.
ವಿಜಯ ಗದ್ದನಕೇರಿ, ಸುರೇಶ ಜಂಗ್ಲಿ, ಮೌಲಪ್ಪ ಬಂಡಿವಡ್ಡರ, ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಹುನಗುಂದ ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಉಪಾಧ್ಯಕ್ಷೆ ರಾಜಮ್ಮ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷೆ ಹುಲಿಗೆಮ್ಮ ಚಲವಾದಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ, ನಗರಸಭೆ ಮತ್ತು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
ಮನೋಹರ ದೊಡ್ಡಮನಿ ಸ್ವಾಗತಿಸಿದರು. ಪೌರಾಯುಕ್ತ ಶ್ರೀನಿವಾಸ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುತ್ತು ಬೀಳಗಿ ನಿರೂಪಿಸಿದರು. ಮಾರ್ಕಡೇಯ ಪುಲಪಾಟ್ಲಿ ವಂದಿಸಿದರು.