ಸೋಮವಾರಪೇಟೆ: ಕನ್ನಡನಾಡು, ನುಡಿಯ ಸೇವೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅಭಿಪ್ರಾಯಪಟ್ಟರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ 1956ರ ನವೆಂಬರ್ 1 ರಂದು ಮೈಸೂರು ರಾಜ್ಯವಾಗಿ ನಂತರ ಕರ್ನಾಟಕವಾಗಿ ಮಾಡಲು ಹಲವು ಹಿರಿಯರು, ಕವಿಗಳು, ಸಾಹಿತಿಗಳು ಶ್ರಮಪಟ್ಟಿದ್ದಾರೆ. ಅವರೆಲ್ಲರ ಶ್ರಮದ ಫಲವಾಗಿ ಇಂದು ಸುಂದರವಾದ ಕನ್ನಡ ನಾಡು ರೂಪಿತವಾಗಿದೆ. ಸಾವಿರಾರು ವರ್ಷಗಳ ಇತಿಹಾಸಹೊಂದಿರುವ ಕನ್ನಡನಾಡಿಗೆ ವಿಶ್ವದಲ್ಲೇ ಅತ್ಯುತ್ತಮವಾದ ಹೆಸರಿದೆ ಎಂದು ಅವರು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, 1956ರವರೆಗೆ ಸ್ವತಂತ್ರ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು ಬೇಷರತ್ತಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ಹೀಗಾಗಿ ಕೊಡಗಿನ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಮುಂದಾಗಬೇಕು. ಅಲ್ಲದೆ ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಅಸಿತ್ವದಲ್ಲಿದ್ದ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಸ್ಥಾನವನ್ನು ರಾಜ್ಯ ಸರ್ಕಾರ ಕೊಡಗಿಗೆ ನೀಡುವ ಮೂಲಕ ಈ ಹಿಂದೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಉಮೇಶ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಜೆ.ದೀಪಕ್, ಲೇಖಕಿ ಎಂ.ಎ.ರುಬಿನಾ, ಕರವೇ ತಾಲೂಕು ಅಧ್ಯಕ್ಷ ದಿವಾಕರ, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕಿಬ್ಬೆಟ್ಟ ಮಂದಣ್ಣ, ತೀರ್ಪುಗಾರರಾದ ಏಂಜೆಲ್ ರಶ್ಮಿ ಡಿಸೋಜ, ಮಾಸ್ಟರ್ ಅನೂಪ್ ಅರ್ಪಿತ್ ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕಕ್ಕೆಹೊಳೆಯ ಬಸವೇಶ್ವರ ದೇವಾಲಯದಿಂದ ಪಟ್ಟಣದ ಎಲ್ಲ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಡೊಳ್ಳು ಕುಣಿತ, ಕಂಸಾಳೆಯೊಂದಿಗೆ ಆಟೋಗಳು ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ತಲುಪಿತು. ಮಧ್ಯಾಹ್ನ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ಅನ್ನ ಸಂತರ್ಪಣೆ ನೆರವೇರಿತು.