ಎಚ್.ಡಿ.ಕೋಟೆ ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಶಾಸಕ ಅನಿಲ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಜಿಲ್ಲೆ

ಸಮಾನತೆಯ ಜೀವನಕ್ಕೆ ಸಂವಿಧಾನ ಕಾರಣ

 ಎಚ್.ಡಿ.ಕೋಟೆ: ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಜೀವಿಸಬೇಕು ಎಂಬುದು ಡಾ. ಬಿ.ಆರ್ ಅಂಬೇಡ್ಕರ್ ಅವರ ಆಶಯವಾಗಿತ್ತು. ಹಾಗಾಗಿಯೇ ಸಂವಿಧಾಯದ ಮೂಲಕ ಸಮಾನತೆ ನೀಡಿದ್ದಾರೆ ಎಂದು ಶಾಸಕ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ 68ನೇ ಪರಿನಿರ್ವಹಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನೋವುಗಳನ್ನು ಅನುಭವಿಸಿದ್ದರಿಂದ ಭಾರತಕ್ಕೆ ಶ್ರೇಷ್ಠ ಸಂವಿಧಾನ ಬರೆಯಲು ಕಾರಣವಾಯಿತು. ಸಂವಿಧಾನದಲ್ಲಿ ಒಂದು ಜಾತಿ, ವರ್ಗಕ್ಕೆ ಮಾತ್ರ ಹಕ್ಕುಗಳನ್ನು ನೀಡಿಲ್ಲ. ಎಲ್ಲರೂ ಹೇಗೆ ಬದುಕಬೇಕು ಎಂಬುದನ್ನು ಸಂವಿಧಾನದಲ್ಲಿ ತಿಳಿಸಲಾಗಿದೆ ಎಂದರು.

ಸ್ವತಂತ್ರ ಬಂದು 78 ವರ್ಷ ಕಳೆದರೂ

ಪ್ರಸ್ತುತ ಸಮಾನತೆ ಸಿಕ್ಕಿದೆಯೇ ಎಂಬುದು ಪ್ರಶ್ನೆಯಾಗಿದೆ. ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಸಮಾನತೆ ಕಾಣಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯಲ್ಲಿ ಸಿಹಿಗಿಂತ ಹೆಚ್ಚು ಕಹಿಯನ್ನು ಅನುಭವಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರ ಆದರ್ಶ, ತತ್ವ-ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಭಾರತ ಕಂಡಂತಹ ಶ್ರೇಷ್ಠರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೊದಲಿಗರು. ಅಂಬೇಡ್ಕರ್ ನಮ್ಮ ಮುಂದೆ ಇಲ್ಲ. ಆದರೆ ಅವರು ಬಿಟ್ಟು ಹೋದ ಚಿಂತನೆ, ಕೊಡುಗೆಯನ್ನು ಸ್ಮರಿಸಬೇಕು ಎಂದರು.

ಗ್ರೇಡ್-2 ತಹಸೀಲ್ದಾರ್ ಶ್ರೀಧರ್, ಡಾ. ರವಿಕುಮಾರ್, ಬಿಒಒ ಕಾಂತರಾಜ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್, ಸಮಾಜ ಕಲ್ಯಾಣ ಅಧಿಕಾರಿ ರಾಮಸ್ವಾಮಿ, ಮುಖಂಡರಾದ ಕ್ಯಾತನಹಳ್ಳಿ ನಾಗರಾಜ್, ರಾಜನಾಯಕ, ಕಾಳಪ್ಪಾಜಿ, ಆನಂದ, ಮುದ್ದಮಲ್ಲಯ್ಯ, ಬಾಲಯ್ಯ ನಂಜುಂಡಮೂರ್ತಿ, ಎಂ.ಡಿ ಮಂಚಯ್ಯ, ಜೀವಿಕ ಬಸವರಾಜ್, ಅನುಷಾ, ಶೈಲಾಸುಧಾಮಣಿ ಇದ್ದರು.