ಪಿರಿಯಾಪಟ್ಟಣದ ವಕೀಲರ ಭವನದಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ಮಾತನಾಡಿದರು. ಎಂ.ಆರ್.ಯೋಗೇಶ್, ಶ್ವೇತಾ, ಧನಪಾಲ್, ಮಹದೇವ್ ಇತರರು ಇದ್ದರು. 
ಜಿಲ್ಲೆ

ಸಂವಿಧಾನ ನಮ್ಮೆಲ್ಲರ ಹೆಮ್ಮೆ

ಲೋಕೇಶ್ ಮನು. ಡಿ

ಪಿರಿಯಾಪಟ್ಟಣ: ಭಾರತದಂತಹ ಅತಿದೊಡ್ಡ ರಾಷ್ಟ್ರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ನಮ್ಮೆಲ್ಲರ ಹೆಮ್ಮೆ ಎಂದು ಹಿರಿಯ ಸಿವಿಲ್ ಶ್ರೇಣಿ ನ್ಯಾಯಾಧೀಶ ಎಂ.ರಾಜು ತಿಳಿಸಿದರು.

ಪಟ್ಟಣದ ವಕೀಲರ ಭವನದಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಜನಸಂಖ್ಯೆಯುಳ್ಳ ನಮ್ಮ ದೇಶದಲ್ಲಿ ವೈವಿಧ್ಯಮಯ ಜನರಿಗೆ ತಕ್ಕಂತೆ ಸಂವಿಧಾನ ರಚನೆ ಮಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಎಲ್ಲರ ಶ್ರಮ, ತ್ಯಾಗ, ಅರ್ಪಣೆಯ ಮನೋಭಾವ ನಮಗೆ ಸ್ಫೂರ್ತಿಯಾಗಬೇಕಿದೆ ಎಂದರು.

ವಿವಿಧ ಭಾಷೆ, ಸಂಸ್ಕೃತಿ, ಜಾತಿ, ಜನಾಂಗ ಧರ್ಮದವರು ಇರುವ ನಮ್ಮ ದೇಶಕ್ಕೆ ಉತ್ತಮ ಸಂವಿಧಾನ ನೀಡುವುದು ಸವಾಲಿನ ಕೆಲಸವಾಗಿತ್ತು. ಆ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿ ರಾಷ್ಟ್ರಕ್ಕೆ ಉತ್ತಮ ಸಂವಿಧಾನ ನೀಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮಲ್ಲಿ ಹಲವು ಮಹನೀಯರ ಜಯಂತಿಯನ್ನು ಆಯಾ ಜಾತಿ ಜನಾಂಗದವರೇ ಆಚರಿಸ ಬೇಕಾದ ಪರಿಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ಸಮಾಜದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬುದಿಲ್ಲ. ಶೋಷಣೆ ಮಾಡುತ್ತಿರುವವರ ಜಾತಿ ಮತ್ತು ಶೋಷಣೆಗೆ ಒಳಗಾಗುತ್ತಿರುವ ಜಾತಿ ಮಾತ್ರ ಇದೆ ಎಂದು ನಾವು ತಿಳಿದುಕೊಂಡರೆ ನಮ್ಮಲ್ಲಿ ಕೀಳರಿಮೆ ಇರಲು ಸಾಧ್ಯವಿಲ್ಲ ಎಂದರು.

ನ್ಯಾಯಾಧೀಶೆ ಶ್ವೇತಾ, ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮಹದೇವ್, ವಕೀಲರಾದ ಎಂ.ಸಿ.ಹರೀಶ್, ಬಿ.ಆರ್.ಗಣೇಶ್ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಉಪಾಧ್ಯಕ್ಷ ಚಂದ್ರೇಗೌಡ, ಖಜಾಂಚಿ ಹರೀಶ್, ಶಿರಸ್ತೇದಾರ್ ನಾಗೇಶ್, ಎಪಿಪಿ ಶ್ರೀನಾಥ್, ಕಾರ್ಯಕ್ರಮ ಆಯೋಜಕರಾದ ವಕೀಲ ಲೋಕೇಶ್ ಇದ್ದರು.